TMC Rebels | ಟಿಎಂಸಿ ಬಂಡಾಯ ಸಂಸದರಿಗೆ ಸುಪ್ರೀಂ ಬಿಗ್ ಶಾಕ್
ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು, ಅಷ್ಟಾಗಿ ಚಿರಪರಿಚಿತವಿಲ್ಲದ ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಕೂಟ ಸೇರಿರುವ 20 ಬಂಡಾಯ (TMC Rebels) ಸಂಸದರಿಗೆ ಸುಪ್ರೀಂ ಕೋರ್ಟ್ ಮಂಗಳವಾರ (25 ಅಗಸ್ಟ್) ನೋಟಿಸ್ ಜಾರಿ ಮಾಡಿದೆ.
ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭೆಯ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಟಿಎಂಸಿ ನಾಯಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಂಚೋಲಿ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ನೋಟಿಸ್‌ಗಳನ್ನು ಜಾರಿ ಮಾಡಿದೆ. ಆರಂಭದಲ್ಲಿ ನ್ಯಾಯಾಲಯವು ಸ್ಪೀಕರ್ ಅವರಿಗೂ ನೋಟಿಸ್ ಜಾರಿ ಮಾಡುವುದಾಗಿ ಸೂಚಿಸಿತ್ತು. ಆದರೆ, ಕೋರ್ಟ್‌ನಲ್ಲಿ ಅವರ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಿನಂತಿಯ ಮೇರೆಗೆ ಸ್ಪೀಕರ್‌ಗೆ ನೋಟಿಸ್ ನೀಡುವುದನ್ನು ತಡೆಹಿಡಿಯಲಾಯಿತು.
ನ್ಯಾಯಾಲಯದಲ್ಲಿ ವಿಷಯ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಾವು ಸ್ಪೀಕರ್ ಪರವಾಗಿ ಹಾಜರಾಗುತ್ತಿದ್ದು, ಅನರ್ಹತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಪೀಕರ್ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಮಗೆ ಸೂಚನೆ ಬಂದಿದೆ ಎಂದು ತಿಳಿಸಿದರು. ಮೆಹ್ತಾ ಅವರ ಸಲ್ಲಿಕೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ, ಇದು ಕೇವಲ ನೋಟಿಸ್ ಜಾರಿ ಮಾಡುವ ವಿಷಯವಲ್ಲ, ನಿರ್ದಿಷ್ಟ ಕಾಲಮಿತಿಯೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವಿಷಯವಾಗಿದೆ ಎಂದು ತಿಳಿಸಿದರು.
ಸಂಸದರ ವಿರುದ್ಧದ ಅನರ್ಹತೆ ಪ್ರಕ್ರಿಯೆಯನ್ನು ತೀರ್ಮಾನಿಸುವಲ್ಲಿ ಉಂಟಾಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ನಡಾವಳಿಗಳ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ, ಅಭಿಷೇಕ್ ಬ್ಯಾನರ್ಜಿ ಪರ ಹಾಜರಿದ್ದ ಕಲ್ಯಾಣ್ ಬ್ಯಾನರ್ಜಿ, ಇದು ತೃಣಮೂಲ ಕಾಂಗ್ರೆಸ್‌ಗೆ ಸಿಕ್ಕ ದೊಡ್ಡ ಗೆಲುವು ಮತ್ತು ನ್ಯಾಯಾಲಯ ಶೀಘ್ರದಲ್ಲೇ ಮುಂದಿನ ದಿನಾಂಕವನ್ನು ನಿಗದಿಪಡಿಸಲಿದೆ ಎಂದು ಹೇಳಿದರು.
ಟಿಎಂಸಿ ಲೋಕಸಭಾ ಸಂಸದರ ಪೈಕಿ 20 ನಾಯಕರು ತಂಗುಂಡು, ತ್ರಿಪುರಾ ಮೂಲದ ರಾಷ್ಟ್ರೀಯ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಎಂಬ ಸಣ್ಣ ಪಕ್ಷದೊಂದಿಗೆ ವಿಲೀನಗೊಂಡ ಬಳಿಕ ಈ ವಿವಾದ ಪ್ರಾರಂಭವಾಗಿತ್ತು. ಬಂಡಾಯ ಸಂಸದರನ್ನು ಸಂಸತ್ತಿನಲ್ಲಿ ಪ್ರಸ್ತುತ ಎನ್‌ಸಿಪಿಐ ಗುಂಪಾಗಿ ಪರಿಗಣಿಸಲಾಗುತ್ತಿದ್ದು, ಅವರು ಎನ್‌ಡಿಎ ಸಭೆಗಳಲ್ಲೂ ಭಾಗವಹಿಸುತ್ತಿದ್ದಾರೆ.
ಈ ಸಂಸದರು ಟಿಎಂಸಿ ಚಿಹ್ನೆಯಡಿ ಆಯ್ಕೆಯಾಗಿದ್ದು, ಮತ್ತೊಂದು ರಾಜಕೀಯ ರಂಗದೊಂದಿಗೆ ಗುರುತಿಸಿಕೊಳ್ಳುವುದು ಸ್ವಯಂಪ್ರೇರಿತವಾಗಿ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದಂತೆ. ಹೀಗಾಗಿ ಇದು ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹತೆಗೆ ಒಳಪಡುತ್ತದೆ ಎನ್ನುವುದು ಟಿಎಂಸಿ ವಾದ. ಈ ನಡುವೆ ತಮ್ಮ ಈ ನಡೆಯು ಕಾನೂನುಬದ್ಧ ವಿಲೀನವಾಗಿದೆ ಎಂದು ಬಂಡಾಯ ಬಣ ಸಮರ್ಥಿಸಿಕೊಳ್ಳುತ್ತಿದೆ. ಈ ಅರ್ಜಿಯಲ್ಲಿ 20 ಬಂಡಾಯ ಸಂಸದರ ಜೊತೆಗೆ ಲೋಕಸಭಾ ಸ್ಪೀಕರ್ ಮತ್ತು ಕಾರ್ಯದರ್ಶಿ ಜನರಲ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅನರ್ಹತೆ ಅರ್ಜಿಯಲ್ಲಿ ಹೆಸರಿಸಲಾದ 20 ಸಂಸದರಾದ ಕಾಕೋಲಿ ಘೋಷ್ ದಸ್ತಿದಾರ್, ಸುದೀಪ್ ಬಂಡೋಪಾಧ್ಯಾಯ, ಶತಾಬ್ದಿ ರಾಯ್, ಪ್ರಸೂನ್ ಬ್ಯಾನರ್ಜಿ, ರಚನಾ ಬ್ಯಾನರ್ಜಿ, ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಪಾರ್ಥ ಭೌಮಿಕ್, ಅರೂಪ್ ಚಕ್ರವರ್ತಿ, ಅಧಿಕಾರಿ ದೀಪಕ್ ದೇವ್, ಸಯಾನಿ ಘೋಷ್, ಬಾಪಿ ಹಲ್ದಾರ್, ಮೊಹಮ್ಮದ್ ಅಬು ತಾಹಿರ್ ಖಾನ್, ಕಾಳಿಪದ ಸೊರೆನ್ ಖೇರ್ವಾಲ್, ಅಸಿತ್ ಕುಮಾರ್ ಮಾಲ್, ಜೂನ್ ಮಲಿಯಾ, ಮಿತಾಲಿ ಬಾಗ್, ಖಲೀಲುರ್ ರಹಮಾನ್, ಮಾಲಾ ರಾಯ್, ಶರ್ಮಿಳಾ ಸರ್ಕಾರ್ ಮತ್ತು ಯೂಸುಫ್ ಪಠಾಣ್ ಅವರಿಗೆ ಕೋರ್ಟ್ ನೋಟಿಸ್ ನೀಡಿದೆ(ಏಜೆನ್ಸೀಸ್).