ಸುಪ್ರೀಂ ಕೊರ್ಟ್, ಮೃತ ತೆಲುಗು ನಟಿ ಪ್ರತ್ಯುಷಾ, ಪ್ರೇಮಿ ಸಿದ್ದಾರ್ಥ ರೆಡ್ಡಿ
- 2002 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ಪ್ರತ್ಯುಷಾ
- ಅತ್ಮಹತ್ಯೆ ಮಾಡಿಕೊಳ್ಳಲು ಪರಸ್ಪರ ಒಪ್ಪಂದ ಮಾಡಿಕೊಂಡು ನಂತರ ಬದುಕುಳಿದವರು ಶಿಕ್ಷೆಗೆ ಅರ್ಹರು ಎಂದು ಸುಪ್ರೀಂ ಕೋರ್ಟ್
- ಸರಿಸುಮಾರು 23 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಎಳೆದ ಸುಪ್ರೀಂ ಕೋರ್ಟ್
ನವದೆಹಲಿ: ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಎರಡೂವರೆ ದಶಕಗಳ ಹಿಂದಿನ ತೆಲುಗು ನಟಿ ಪ್ರತ್ಯುಷಾ (Actress Pratyusha) ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಗೆಳೆಯ ಗುಡಿಪಲ್ಲಿ ಸಿದ್ಧಾರ್ಥ ರೆಡ್ಡಿಗೆ ವಿಧಿಸಲಾದ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಆತ್ಮಹತ್ಯೆಗೆ ಪರಸ್ಪರ ಒಪ್ಪಿದ ಪ್ರಕರಣದಲ್ಲಿ ಬದುಕುಳಿದವರು ಶಿಕ್ಷಾರ್ಹರು ಎಂದು ಹೇಳಿದೆ.
ಇದು ಆರೋಪಿ ಮತ್ತು ಮೃತ ವ್ಯಕ್ತಿಯ ನಡುವಿನ ಆತ್ಮಹತ್ಯೆ ಒಪ್ಪಂದ ಪ್ರಕರಣ ಎಂದು ದಾಖಲೆಗಳು ಮತ್ತು ಸಾಕ್ಷ್ಯಗಳಿಂದ ಸ್ಪಷ್ಟವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ರಾಜೇಶ್ ಬಿಂದಾಲ್ ಅವರ ನ್ಯಾಯಪೀಠ, ಆತ್ಮಹತ್ಯೆಗೆ ಇಬ್ಬರೂ ಪರಸ್ಪರ ಒಪ್ಪಿರುವುದರಿಂದ ಬದುಕುಳಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದೆಂದು ಹೇಳಿದೆ.
ಜೀವ ರಕ್ಷಣೆ ಪ್ರಭುತ್ವದ ಮೂಲಭೂತ ಹಿತಾಸಕ್ತಿಯಾಗಿರುವುದರಿಂದ, ಆತ್ಮಹತ್ಯೆಗೆ ಸಹಾಯ ಮಾಡುವುದನ್ನು ಕಾನೂನು ಅಪರಾಧವಾಗಿ ಪರಿಗಣಿಸುತ್ತದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನಲೆ ಸಿದ್ಧಾರ್ಥ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಲು ನ್ಯಾಯಪೀಠ ಅನುಮತಿಸಿದ್ದು, ನಾಲ್ಕು ವಾರಗಳ ಒಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಹೇಳಿದೆ.
ಪ್ರಕರಣದಲ್ಲಿ, ರೆಡ್ಡಿ ಕೀಟನಾಶಕದ ಮಾರಕ ಪ್ರಭಾವದ ಬಗ್ಗೆ ಗೊತ್ತಿದ್ದು, ಅದನ್ನು ಖರೀದಿಸಿದ್ದಾನೆ. ಒಪ್ಪಂದಂತೆ ಪ್ರತ್ಯುಷಾ ಜೊತೆ ವಿಷ ಸೇವಿಸಿದ್ದಾರೆ ಆದರೆ ಸಿದ್ಧಾರ್ಥ ಬದುಕುಳಿದಿದ್ದು, ಪ್ರತ್ಯುಷಾ ಸಾವನ್ನಪ್ಪಿದ್ದಾರೆ. ಆದ್ದರಿಂದ ಸಿದ್ಧಾರ್ಥ ಆತ್ಮಹತ್ಯೆಗೆ ಪ್ರೇರಣೆ ನೀಡಿದ ವ್ಯಕ್ತಿಯಾಗಿದ್ದು, ಇತನೇ ಪ್ರತ್ಯುಷಾಗೆ ವಿಷಪ್ರಾಶನ ಮಾಡಿಸಿದ್ದಾನೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ.
ಹೈಕೋರ್ಟ್ ಪ್ರಕರಣವನ್ನು ನಿಭಾಯಿಸಿದ ರೀತಿಯನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ ಎಂದ ಸುಪ್ರೀಂ ಪೀಠ, ಇದು ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆಮಾಡಿದ ಪ್ರಕರಣ ಎನ್ನುವುದಕ್ಕೆ ಸಾಕ್ಷಿಗಳಿಲ್ಲ, ಬದಲಾಗಿ ಇದು ವಿಷಪ್ರಯೋಗದಿಂದ ನಡೆದ ಕೊಲೆಯಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿ, ಹೈಕೋರ್ಟ್ ರೆಡ್ಡಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದು, ಬಾಕಿ ಶಿಕ್ಷೆಯನ್ನು ಅನುಭವಿಸಲು ರೆಡ್ಡಿ ನಾಲ್ಕು ವಾರಗಳಲ್ಲಿ ಶರಣಾಗುವಂತೆ ಆದೇಶಿಸಿದೆ.
ನಟಿ ಪ್ರತ್ಯುಷಾಳದ್ದು ಆತ್ಮಹತ್ಯೆಯಲ್ಲ, ಬದಲಾಗಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ಆಕೆಯ ತಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೆಡ್ಡಿ ವಿರುದ್ಧ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ರೆಡ್ಡಿಯನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ, ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ನಂತರ ಹೈಕೋರ್ಟ್ ರೆಡ್ಡಿ ವಿರುದ್ಧದ ದೋಷಾರೋಪವನ್ನು ಎತ್ತಿಹಿಡಿದು, ಐದು ವರ್ಷಗಳ ಕಾಲ ವಿಧಿಸಲಾಗಿದ್ದ ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ ದಂಡದ ಮೊತ್ತವನ್ನು ಹೆಚ್ಚಿಸಿತ್ತು. ಈ ತೀರ್ಪುಗಳ ವಿರುದ್ಧ ರೆಡ್ಡಿ ಹಾಗೂ ಪ್ರತ್ಯುಷಾ ತಾಯಿ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ರೆಡ್ಡಿ ತನ್ನ ವಿರುದ್ಧದ ದೋಷಾರೋಪ ಪ್ರಶ್ನಿಸಿದರೆ ಪ್ರತ್ಯುಷಾಳ ತಾಯಿ ಶಿಕ್ಷೆ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಇದೀಗ ನೀಡಿರುವ ತೀರ್ಪು 23 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದಂತಾಗಿದೆ,(ಏಜನ್ಸೀಸ್).