ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ
ನವದೆಹಲಿ: ಕಣ್ಣಿನ ಚಿಕಿತ್ಸೆಗಾಗಿ ಸೆಪ್ಟೆಂಬರ್‌ನಲ್ಲಿ ಮೂರು ವಾರಗಳ ಕಾಲ ವಿದೇಶ ಪ್ರವಾಸ ಮಾಡಲು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ(ಆ. 10) ಅನುಮತಿ ನೀಡಿದೆ ಎಂದು ವರದಿಯಾಗಿದೆ.
ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ವಿಧಿಸಲಾದ ಪ್ರಯಾಣ ನಿರ್ಬಂಧವನ್ನು ತೆಗೆಯಬೇಕು ಮತ್ತು ವಿದೇಶಿ ಪ್ರವಾಸಕ್ಕೆ ಅನುಮತಿ ಕೋರಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಜೆಐ ಸೂರ್ಯ ಕಾಂತ್ ನೇತೃತ್ವದ ಪೀಠವು, ಹಲವು ಷರತ್ತುಗಳನ್ನು ವಿಧಿಸಿ ಬ್ಯಾನರ್ಜಿಯವರಿಗೆ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದೆ.
ಬ್ಯಾನರ್ಜಿಯವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಮಾತ್ರ ಪ್ರಯಾಣಿಸಬಹುದು. ಮತ್ತು ಅವರ ಪ್ರಯಾಣದ ವಿವರಗಳು, ವಿದೇಶದಲ್ಲಿ ಎಲ್ಲಿ ತಂಗುವ, ಚಿಕಿತ್ಸೆ ಪಡೆಯುವ ವೈದ್ಯರು ಮತ್ತು ಆಸ್ಪತ್ರೆ, ಹಾಗೂ ವಸತಿ ಮತ್ತು ವಿಮಾನ ವಿವರಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಬೇಕು ಎಂದು ಸೂಚಿಸಿದೆ. ಜೊತೆಗೆ ಅವರು ನೀಡಿದ ಮಾಹಿತಿಯನ್ನು ತನಿಖಾ ಸಂಸ್ಥೆ ವಿವರಗಳನ್ನು ಗೌಪ್ಯವಾಗಿಡಬೇಕು ಎಂದು ನಿರ್ದೇಶಿಸಿದೆ.
ಇದಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗುವಂತೆ ಕೋಲ್ಕತ್ತಾ ಹೈಕೋರ್ಟ್ ಸೂಚಿಸಿತ್ತು. ಆದರೆ ಅಭಿಷೇಕ್ ಬ್ಯಾನರ್ಜಿ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಹೈಕೋರ್ಟ್ ಅವರ ಕಣ್ಣಿನ ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿತ್ತು (ಏಜೆನ್ಸೀಸ್).