Bofors Case | ಬೋಫೋರ್ಸ್ ಅಧ್ಯಾಯ ಅಂತ್ಯ: ಹಿಂದೂಜಾ ಸಹೋದರರ ಖುಲಾಸೆ ಎತ್ತಿಹಿಡಿದ ಸುಪ್ರೀಂ ಕೋರ್ಟ್!
ಬೋಫೋರ್ಸ್ ಪ್ರಕರಣದಲ್ಲಿ ಹಿಂದೂಜಾ ಸಹೋದರರು ಹಾಗೂ ಸ್ವೀಡನ್‌ನ ಎಬಿ ಬೋಫೋರ್ಸ್ ಕಂಪನಿ ಮೇಲಿದ್ದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು 2005ರಲ್ಲಿ ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ವಕೀಲ ಅಜಯ್ ಕೆ. ಅಗರ್ವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿತು. ಇದರೊಂದಿಗೆ ದಶಕಗಳಷ್ಟು ಹಳೆಯ ಪ್ರಕರಣವನ್ನು ಮರುಜೀವಗೊಳಿಸುವ ಮತ್ತೊಂದು ಪ್ರಯತ್ನಕ್ಕೆ ತೆರೆ ಬಿದ್ದಂತಾಗಿದೆ.
ವಿಚಾರಣೆ ವೇಳೆ, ಶ್ರೀಚಂದ್ ಪಿ. ಹಿಂದೂಜಾ ಮತ್ತು ಗೋಪಿಚಂದ್ ಪಿ. ಹಿಂದೂಜಾ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಅರ್ಜಿಯಿಂದ ಅವರ ಹೆಸರುಗಳನ್ನು ತೆಗೆದುಹಾಕಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಅಗರ್ವಾಲ್ ಕೋರಿದರು. ಆದರೆ ಪೀಠವು ಹೆಚ್ಚುವರಿ ಸಮಯ ನೀಡಲು ನಿರಾಕರಿಸಿತಲ್ಲದೆ, ಈ ವಿಷಯವನ್ನು ಇನ್ನು ಮುಂದೆ ಎಳೆದಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. 2005ರಲ್ಲೇ ದೆಹಲಿ ಹೈಕೋರ್ಟ್ ನಡಾವಳಿಗಳನ್ನು ರದ್ದುಗೊಳಿಸಿದ್ದು, ಅದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯೂ ವಿಫಲವಾಗಿರುವಾಗ, ಈ ದಾವೆಯನ್ನು ಮುಂದುವರಿಸುವುದರಲ್ಲಿ ಏನು ಅರ್ಥವಿದೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಪ್ರಶ್ನಿಸಿದರು.
ಸಾಕ್ಷಿ ನೀಡುವಲ್ಲಿ ಸಿಬಿಐ ವಿಫಲ!
2005 ರ ಮೇ 31 ರಂದು ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್, ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದೂಜಾ ಅವರೊಂದಿಗೆ ಎಬಿ ಬೋಫೋರ್ಸ್ ಸಂಸ್ಥೆಯನ್ನು ಎಲ್ಲಾ ಕ್ರಿಮಿನಲ್ ಆರೋಪಗಳಿಂದ ಮುಕ್ತಗೊಳಿಸಿತ್ತು. ಪ್ರಾಸಿಕ್ಯೂಷನ್ ನೀಡಿದ್ದ ಸಾಕ್ಷ್ಯಾಧಾರಗಳಲ್ಲಿ ಗಂಭೀರ ನ್ಯೂನತೆಗಳಿರುವುದನ್ನು ಗುರುತಿಸಿದ್ದ ನ್ಯಾಯಾಲಯ, 1986ರ ಶಸ್ತ್ರಾಸ್ತ್ರ ಒಪ್ಪಂದವನ್ನು ಪಡೆಯುವಲ್ಲಿ ಹಿಂದೂಜಾ ಸಹೋದರರ ನೇರ ಪಾತ್ರವಿದೆ ಎಂದಾಗಲಿ ಅಥವಾ ಅವರು ಪಡೆದಿದ್ದಾರೆ ಎನ್ನಲಾದ ಹಣವು ಅಕ್ರಮ ಕಮಿಷನ್‌ಗೆ ಸಂಬಂಧಿಸಿದ್ದು ಎಂದಾಗಲಿ ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ ಎಂದು ಹೇಳಿತ್ತು.
ಸಿಬಿಐ ಸ್ವೀಡಿಷ್ ಅಧಿಕಾರಿಗಳಿಂದ ಪಡೆದ ದಾಖಲೆಗಳು ಅಸಲಿ ದಾಖಲೆಗಳಾಗಿರಲಿಲ್ಲ ಅಥವಾ ದೃಢೀಕೃತ ಪ್ರತಿಗಳಾಗಿರಲಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿತ್ತು. ಇಂತಹ ಅಸಲಿ ಅಲ್ಲದ ದಾಖಲೆಗಳನ್ನು ನೆಚ್ಚಿಕೊಂಡು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವುದು ಸಾರ್ವಜನಿಕ ಸಮಯ ಮತ್ತು ಹಣವನ್ನು ಪೋಲು ಮಾಡಿದಂತೆ ಹಾಗೂ ವಿಚಾರಣೆ ಎದುರಿಸುತ್ತಿರುವವರಿಗೆ ಅನ್ಯಾಯ ಮಾಡಿದಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದಿದೆ ಎನ್ನಲಾದ ಸಿಬಿಐ ತನಿಖೆಯ ವಿರುದ್ಧವೂ ತೀರ್ಪಿನಲ್ಲಿ ತೀವ್ರ ವಿಮರ್ಶೆ ವ್ಯಕ್ತವಾಗಿತ್ತು. ಈ ತೀರ್ಪಿನ ನಂತರ ಹಿಂದೂಜಾ ಸಹೋದರರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು ಮತ್ತು ಅವರ ಜಾಮೀನು ಬಾಂಡ್‌ಗಳನ್ನು ಹಿಂತಿರುಗಿಸಲು ಆದೇಶಿಸಲಾಯಿತು, ಇದರಿಂದ ಸುಮಾರು 14 ವರ್ಷಗಳ ಕಾಲ ನಡೆದ ಕಾನೂನು ಸಮರಕ್ಕೆ ಅಂತ್ಯ ಹಾಡಿದಂತಾಗಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು 2018 ರ ನವೆಂಬರ್ನಲ್ಲಿ ವಜಾಗೊಳಿಸುವ ಮೂಲಕ ಪ್ರಕರಣಕ್ಕೆ ಮರುಜೀವ ನೀಡುವ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ಮುಂಚೆಯೇ ಹಿನ್ನಡೆ ನೀಡಿತ್ತು. ಮೇಲ್ಮನವಿ ಸಲ್ಲಿಸಲು 4,522 ದಿನಗಳ ವಿಳಂಬವಾಗಿರುವುದಕ್ಕೆ ಸೂಕ್ತ ಕಾರಣವಿಲ್ಲ ಎಂದು ಶೀರ್ಷ ನ್ಯಾಯಾಲಯ ಅಂದು ಉಲ್ಲೇಖಿಸಿತ್ತು.
1986 ರ ಮಾರ್ಚ್ 24 ರಂದು ಭಾರತ ಸರ್ಕಾರ ಮತ್ತು ಸ್ವೀಡಿಷ್ ರಕ್ಷಣಾ ಸಂಸ್ಥೆ ಎಬಿ ಬೋಫೋರ್ಸ್ ನಡುವೆ 400 ಹೊವಿಟ್ಜರ್ ಫಿರಂಗಿಗಳ ಖರೀದಿಗಾಗಿ ನಡೆದ 1,437 ಕೋಟಿ ರೂಪಾಯಿ ಒಪ್ಪಂದದಿಂದ ಬೋಫೋರ್ಸ್ ವಿವಾದ ಹುಟ್ಟಿಕೊಂಡಿತು. ಒಪ್ಪಂದವನ್ನು ಪಡೆದುಕೊಳ್ಳಲು ಭಾರತೀಯ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಅಕ್ರಮ ಕಮಿಷನ್ ನೀಡಲಾಗಿದೆ ಎಂದು 1987 ರಲ್ಲಿ ಸ್ವೀಡಿಷ್ ರೇಡಿಯೋ ಆರೋಪಿಸಿದ ನಂತರ ಈ ಒಪ್ಪಂದವು ಪ್ರಮುಖ ರಾಜಕೀಯ ಹಗರಣವಾಗಿ ಹೊರಹೊಮ್ಮಿತ್ತುಸುಪ್ರೀಂ ಕೋರ್ಟ್‌ನ ಈ ಇತ್ತೀಚಿನ ತೀರ್ಪಿನೊಂದಿಗೆ ಬೋಫೋರ್ಸ್ ಪ್ರಕರಣದ ಎಲ್ಲಾ ಕಾನೂನು ಹೋರಾಟಗಳಿಗೆ ಸಂಪೂರ್ಣ ಅಂತ್ಯ ಬಿದ್ದಂತಾಗಿದೆ.(ಏಜೆನ್ಸೀಸ್).