ಸುಪ್ರೀಂ ಕೋರ್ಟ್​  
ದೇಶ

'ಬ್ಯಾಗ್​ನಿಂದ ಹೊರಬಿದ್ದ ಭೂತ ಇದ್ದಂತೆ': ಕೋರ್ಟ್ ಕಲಾಪ ರೆಕಾರ್ಡಿಂಗ್, ಶೇರಿಂಗ್‌ಗೆ 'ಸುಪ್ರೀಂ' ನಿಷೇಧ

ಪ್ರಮುಖ ಮುಖ್ಯಾಂಶಗಳು

  • ಕೋರ್ಟ್ ಕಲಾಪದ ವಿಡಿಯೋ ಹಂಚಿಕೆ ಹಾಗೂ ಎಡಿಟಿಂಗ್​ ನಿಷೇಧ
  • ನ್ಯಾಯಾಲಯ 24x7 ಮನರಂಜನಾ ಚಾನೆಲ್ ಅಲ್ಲ
  • ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನೋಟಿಸ್​ ಜಾರಿ
ನವದೆಹಲಿ: ನ್ಯಾಯಾಲಯದ ಆವರಣದಲ್ಲಿ ನಡೆಯುವ ಕಲಾಪಗಳ ವಿಡಿಯೋ ಹಾಗೂ ಆಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನುಮತಿ ಇಲ್ಲದೆ ಹಂಚಿಕೊಳ್ಳುವುದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.
ಪೂರ್ವಾನುಮತಿ ಪಡೆಯದೆಯೇ ಕೋರ್ಟ್ ಕಲಾಪಗಳ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಪಬ್ಲಿಶ್​ ಮಾಡುವುದು ಹಾಗೂ ಅದರಿಂದ ಹಣ ಗಳಿಸುವುದನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧಿಸಲು ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಕೋರ್ಟ್ ವಿಡಿಯೋಗಳ ಪ್ರಸಾರವನ್ನು ಬೆನ್ನತ್ತಿರುವ ಕಂಟ್ರೋಲ್​ ತಪ್ಪಿದ ಭೂತ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜೋಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.

ಸುಪ್ರೀಂ ಕೋರ್ಟ್ ಆದೇಶವೇನು?

ಲೈವ್‌ಸ್ಟ್ರೀಮಿಂಗ್ ಹಾಗೂ ವಿಡಿಯೋ ವೈರಲ್ ತಡೆಯಲು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಪೀಠವು, ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಅಥವಾ ಆಯಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್ ಅವರ ಪೂರ್ವಾನುಮತಿ ಇಲ್ಲದೆಯೇ ಯಾವುದೇ ನ್ಯಾಯಾಂಗ ಕಲಾಪಗಳ ದೃಶ್ಯ ಅಥವಾ ಆಡಿಯೊವನ್ನು ಎಡಿಟ್ ಹಾಗೂ ಅಪ್‌ಲೋಡ್ ಮಾಡುವಂತಿಲ್ಲ ಎಂದಿದೆ.
ಈ ಆದೇಶವು ಪತ್ರಕರ್ತರ ಸಾಮಾನ್ಯ ಸುದ್ದಿ ವರದಿಗಾರಿಕೆಗೆ ಅನ್ವಯಿಸುವುದಿಲ್ಲ ಹಾಗೂ ಇದು ಮಾಧ್ಯಮಗಳ ಮೇಲಿನ ಗ್ಯಾಗ್ ಆರ್ಡರ್ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದರ ಜತೆ, ಯೂಟ್ಯೂಬ್, ಮೆಟಾ (ಫೇಸ್‌ಬುಕ್/ಇನ್‌ಸ್ಟಾಗ್ರಾಮ್) ಹಾಗೂ 'ಎಕ್ಸ್' (ಟ್ವಿಟರ್) ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡುವುದಾಗಿಯೂ ತಿಳಿಸಿದೆ.

ಕೋರ್ಟ್ 24x7 ಮನರಂಜನಾ ಚಾನೆಲ್ ಅಲ್ಲ

ವಿಚಾರಣೆ ವೇಳೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ, ನಾವು ತಡೆಗಟ್ಟುತ್ತಿರುವುದು ವಿಡಿಯೋ ರೆಕಾರ್ಡಿಂಗ್ ಮತ್ತು ಅದನ್ನು ಅಪ್‌ಲೋಡ್ ಮಾಡುವುದನ್ನು ಮಾತ್ರ. ನ್ಯಾಯಾಲಯವು 24x7 ಮನರಂಜನಾ ಚಾನೆಲ್ ಅಲ್ಲ. ವರ್ಚುವಲ್ ವಿಚಾರಣೆಯ ಲಿಂಕ್‌ಗಳನ್ನು ಮನಬಂದಂತೆ ಹಂಚಿಕೊಳ್ಳುವುದನ್ನೂ ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಇತ್ತೀಚೆಗೆ ಕೋರ್ಟ್‌ನಲ್ಲಿ ವಕೀಲರೊಬ್ಬರು ಜಡ್ಜ್ ಕಡೆಗೆ ಪೇಪರ್ ಎಸೆದು ನಿಂದಿಸಿದ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನ್ಯಾಯಾಧೀಶರ ಹಾಗೂ ವಕೀಲರ ಮಾತುಗಳನ್ನು ಬದಲಾಯಿಸಿ ದುರುಪಯೋಗ ಮಾಡಿಕೊಂಡಿದ್ದೂ ಇದೆ" ಎಂದು ಕೋರ್ಟ್ ಗಮನಕ್ಕೆ ತಂದರು,(ಏಜೆನ್ಸೀಸ್).