Narottam Mishra | ಮಾಜಿ ರಾಜ್ಯ ಗೃಹಸಚಿವ ನರೋತ್ತಮ್ ಮಿಶ್ರಾ (ಮೊದಲನೆಯವರು) ,ಟಿಕೆಟ್​ ಪಡೆದ ಅಶುತೋಷ್ ತಿವಾರಿ (ಎರಡನೇಯವರು) 
ದೇಶ

ಮಾಜಿ ಗೃಹಸಚಿವ ನರೋತ್ತಮ್ ಮಿಶ್ರಾಗೆ ಬಿಜೆಪಿ ಟಿಕೆಟ್ ಮಿಸ್!...ಹೆದ್ದಾರಿ ತಡೆದು ಬೆಂಬಲಿಗರ ರಂಪಾಟ; 15 ಕಿ.ಮೀ ಟ್ರಾಫಿಕ್ ಜಾಮ್ | Narottam Mishra

Narottam Mishra: ಮಾಜಿ ರಾಜ್ಯ ಗೃಹಸಚಿವ ನರೋತ್ತಮ್ ಮಿಶ್ರಾಗೆ ಉಪಚುನಾವಣೆಯ ಟಿಕೆಟ್ ನಿರಾಕರಿಸಿ, ಅವರ ಬದಲಿಗೆ ಅಶುತೋಷ್ ತಿವಾರಿಗೆ ಬಿಜೆಪಿ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಮಧ್ಯಪ್ರದೇಶದ ದತಿಯಾ ಬಿಜೆಪಿ ಘಟಕದಲ್ಲಿ ಭಾರಿ ಗದ್ದಲ ಉಂಟಾಗಿದೆ. ಪಕ್ಷದ ಈ ನಿರ್ಧಾರದಿಂದ ಕೋಪಗೊಂಡ ಬಿಜೆಪಿ ಜಿಲ್ಲಾಧ್ಯಕ್ಷ ರಘುವೀರ್ ಶರಣ್ ಸೇರಿದಂತೆ ಹಲವು ಕೌನ್ಸಿಲರ್‌ಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಟಿಕೆಟ್​​ ನಿರಾಕರಣೆಯ ಹಿನ್ನಲೆಯಲ್ಲಿ ಮಿಶ್ರಾರ ಸಾವಿರಾರು ಬೆಂಬಲಿಗರು ಝಾನ್ಸಿ ಹೆದ್ದಾರಿಯನ್ನು (NH-44) ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಕಿಲೋಮೀಟರ್‌ಗಟ್ಟಲೆ ದಟ್ಟಣೆ ಉಂಟಾಯಿತು. ಈ ವೇಳೆ ಬೆಂಬಲಿಗರು ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.

ಎಸ್​​ಪಿ ಖಾಂಡೇಲ್ವಾಲ್ ಹೇಳಿದ್ದೇನು..?

ಈ ಕುರಿತು ಎಎನ್ಐ (ANI) ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ದತಿಯಾ ಎಸ್‌ಪಿ ಮಯೂರ್ ಖಾಂಡೇಲ್ವಾಲ್, ನಿನ್ನೆ ದತಿಯಾ ನಗರದಲ್ಲಿ ವಾತಾವರಣವನ್ನು ಹಾಳುಮಾಡಲು 3,000ಕ್ಕೂ ಹೆಚ್ಚು ಪುಂಡರು ಯತ್ನಿಸಿದರು. ಅವರು ಮಾರುಕಟ್ಟೆಗಳನ್ನು ಬಂದ್ ಮಾಡಲು ಪ್ರಯತ್ನಿಸಿದರು. ನಿನ್ನೆ ಸಂಜೆ 6 ಗಂಟೆಯಿಂದಲೂ ಇಲ್ಲಿ ಕುಳಿತು ರಸ್ತೆ ತಡೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ನಾನು ಅವರೆಲ್ಲರಿಗೂ ಈ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ಪದೇ ಪದೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಈ ರಸ್ತೆ ತಡೆಯಿಂದ ಉಂಟಾದ ಸಂಚಾರ ದಟ್ಟಣೆಯು ಸುಮಾರು 15 ಕಿ.ಮೀ ಉದ್ದದವರೆಗೆ ವ್ಯಾಪಿಸಿದ್ದು, ನೆರೆಯ ಜಿಲ್ಲೆಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಇಂದು ಮುಂಜಾನೆ ಸುಮಾರು 4 ಗಂಟೆಗೆ ಅವರು ದಿಢೀರನೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ತಿಳಿಸಿದರು.
ಪೊಲೀಸರು ಅಶ್ರುವಾಯು ಬಳಸಿದ ನಂತರ ಕಲ್ಲು ತೂರಾಟ ಮತ್ತಷ್ಟು ತೀವ್ರಗೊಂಡಿತು. ನಮ್ಮ ಸಿಬ್ಬಂದಿಯಲ್ಲಿ 6ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚುವರಿ ಎಸ್‌ಪಿ ಮತ್ತು ನನಗೂ ಗಾಯಗಳಾಗಿವೆ. ನಂತರ ನಾವು ಮತ್ತೆ ಅಶ್ರುವಾಯು ಬಳಸಿ, ನಮ್ಮ ಬಲಪ್ರದರ್ಶನದ ಮೂಲಕ ಅವರನ್ನು ಚದುರಿಸಿದೆವು. ಅವರು ಈಗ ಅಡಗಿಕೊಂಡಿದ್ದಾರೆ ಎಂದರು.
ಈಗ ಅವರೆಲ್ಲರಿಗೂ ಶರಣಾಗುವಂತೆ ಅಥವಾ ಶಾಂತಿಯುತವಾಗಿ ಸ್ಥಳ ತೊರೆಯುವಂತೆ ಸೂಚಿಸಲಾಗಿದೆ. ರಸ್ತೆ ತಡೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೆಲವು ವ್ಯಕ್ತಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಪ್ರಸ್ತುತ ಸಂಚಾರ ದಟ್ಟಣೆಯನ್ನು ತೆರವುಗೊಳಿಸಲಾಗುತ್ತಿದ್ದು, ದತಿಯಾದಾದ್ಯಂತ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಎಸ್​​ಪಿ ಖಾಂಡೇಲ್ವಾಲ್ ತಿಳಿಸಿದರು.

ಯಾರು ಈ ನರೋತ್ತಮ್ ಮಿಶ್ರಾ..?

ನರೋತ್ತಮ್ ಮಿಶ್ರಾ ಮಧ್ಯಪ್ರದೇಶದ ಮಾಜಿ ಗೃಹಸಚಿವರಾಗಿದ್ದಾರೆ. ಮಿಶ್ರಾ 2008 ರಿಂದ ದತಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಾಬುಲಾಲ್ ಗೌರ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಆಡಳಿತಾವಧಿಯಲ್ಲಿ ಮಿಶ್ರಾಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗೃಹ, ಜಲಸಂಪನ್ಮೂಲ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ವೈದ್ಯಕೀಯ ಶಿಕ್ಷಣ, ಆಯುಷ್, ವಸತಿ, ಶಿಕ್ಷಣ ಮತ್ತು ನಗರಾಭಿವೃದ್ಧಿ ಸೇರಿದಂತೆ ಹಲವು ಸಚಿವಾಲಯಗಳ ಜವಾಬ್ದಾರಿಯನ್ನು ನೀಡಲಾಗಿತ್ತು. ಮಿಶ್ರಾ 2009 ರ ಲೋಕಸಭಾ ಚುನಾವಣೆಯಲ್ಲಿ ಗುಣಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ 2,49,737 ಮತಗಳ ಭಾರಿ ಅಂತರದಿಂದ ಸೋತಿದ್ದರು.

ಈ ಉಪಚುನಾವಣೆ ಏಕೆ..?

ಜುಲೈ 30 ರಂದು ನಡೆಯಲಿರುವ ದತಿಯಾ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಶುಕ್ರವಾರ ಆಶುತೋಷ್ ತಿವಾರಿ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಟಿಕೆಟ್‌ನ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ನರೋತ್ತಮ್ ಮಿಶ್ರಾಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ರಾಜ್ಯ ಸಂಘಟನೆಯ ಸಕ್ರಿಯ ಸದಸ್ಯರಾಗಿರುವ ತಿವಾರಿ, ತಮ್ಮ ಹೆಸರು ಘೋಷಣೆಯ ಬಳಿಕ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ತಿವಾರಿ, ಮಿಶ್ರಾ ಅವರು ಹಿರಿಯ ನಾಯಕರಾಗಿದ್ದು, ನನಗೆ ಪೋಷಕರ ಸಮಾನರು. ಅವರು ನನಗಾಗಿ ಹಾಗೂ ಪಕ್ಷಕ್ಕಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ವಂಚನೆ ಪ್ರಕರಣವೊಂದರಲ್ಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರತಿಗೆ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ದೋಷಿ ಎಂದು ತೀರ್ಪು ನೀಡಿದ ನಂತರ ಅವರ ಸದಸ್ಯತ್ವ ರದ್ದಾಗಿದ್ದರಿಂದ ಈ ಉಪಚುನಾವಣೆ ಅನಿವಾರ್ಯವಾಯಿತು. ಜುಲೈ 30 ರಂದು ಮತದಾನ ನಡೆಯಲಿದ್ದು, ಆ ಆಗಸ್ಟ್ 3 ರಂದು ಮತ ಎಣಿಕೆ ನಿಗದಿಯಾಗಿದೆ(ಏಜೆನ್ಸೀಸ್​).