ನವದೆಹಲಿ: ಫಲಿತಾಂಶ ಬಂದು 10 ದಿನಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಕೇರಳ ಸಿಎಂ ಹೆಸರನ್ನು ಘೋಷಣೆ ಮಾಡಿದ್ದು, ಹೈಕಮಾಂಡ್ ಆಪ್ತರಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್(K C Venugopal) ಅವರಿಗೆ ಹುದ್ದೆ ಕೈತಪ್ಪಿದ್ದು, ವಿಪಕ್ಷ ನಾಯಕರಾಗಿದ್ದ ವಿಡಿ ಸತೀಶನ್ ಅವರಿಗೆ ಪಕ್ಷ ಮಣೆ ಹಾಕಿದೆ.
ಕೇರಳ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಸಾರ್ವಜನಿಕರ ಒಲವು ಅರಿತು ವಿಡಿ ಸತೀಶನ್ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಿದೆ. ಆದರೆ ಕಾಂಗ್ರೆಸ್ನ 62 ಶಾಸಕರಲ್ಲಿ ಬಹುತೇಕ 47 ಶಾಸಕರ ಒಲುವು ಕೆ.ಸಿ.ವೇಣುಗೋಪಾಲ್ ಪರವಿತ್ತು ಎನ್ನಲಾಗಿದೆ.
ಮುಖ್ಯಮಂತ್ರಿ ಪದವಿ ಕೈತಪ್ಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಸಿ.ವೇಣುಗೋಪಾಲ್, ಪಕ್ಷದ ನಿರ್ಧಾರವನ್ನು ಸ್ವಾಗತಿಸಿದ್ದು, ಸಿಎಂ ಆಗಿ ಆಯ್ಕೆಯಾಗಿರುವ ವಿಡಿ ಸತೀಶನ್ ಅವರನ್ನು ಅಭಿನಂದಿಸಿದ್ದು, ಪಕ್ಷ ಮತ್ತು ಕಾರ್ಯಕರ್ತರೇ ತಮಗೆ ಸರ್ವೋಚ್ಚರು ಎಂದು ಹೇಳಿದ್ದಾರೆ.
ಪಕ್ಷದ ನಾಯಕತ್ವವು ಪ್ರತಿಯೊಂದು ಸಂಗತಿಯನ್ನು ಪರಿಗಣಿಸಿದ ನಂತರ ಅಂತಿಮ ನಿರ್ಧಾರ ತೆಗೆದುಕೊಂಡಿದೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ. ವಿ.ಡಿ. ಸತೀಶನ್ ಅವರನ್ನು ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಆ ನಿರ್ಧಾರವನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಮತ್ತು ವಿ.ಡಿ. ಸತೀಶನ್ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಗೆ ಹುದ್ದೆ ಕೈತಪ್ಪಿದ್ದರ ಬಗ್ಗೆ ಮಾತನಾಡಿರುವ ಅವರು, ತಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದು, ತಮಗೆ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷ ಮತ್ತು ಕಾರ್ಯಕರ್ತರ ಹಿತವೇ ಮುಖ್ಯವಾಗಿದ್ದು, ಅದರ ಶಿಸ್ತಿಗೆ ತಾವು ಸದಾ ಬದ್ಧವಾಗಿರುತ್ತೇನೆ. ಪಕ್ಷವೇ ನನಗೆ ಎಲ್ಲವೂ. ಕಾರ್ಯಕರ್ತರಿಗೆ ನೋವಾಗಿದ್ದರೆ, ನನಗೂ ನೋವಾಗಿದೆ ಅಂತ ಅರ್ಥ ಹೇಳಿದ್ದಾರೆ.
ಪಕ್ಷದೊಳಗೆ ನಡೆದಿದ್ದ ಬಣ ಜಗಳ ಮತ್ತು ತಮ್ಮ ವಿರುದ್ಧ ಕೇಳಿಬಂದಿದ್ದ ಟೀಕೆಗಳ ಬಗ್ಗೆಯೂ ಮಾತನಾಡಿದ ವೇಣುಗೋಪಾಲ್, ಟೀಕೆ ಮಾಡುವವರು ಅದನ್ನು ಮುಂದುವರಿಸಬಹುದು ಆದರೆ ತಾವು ಮಾತ್ರ ಪಕ್ಷದ ಏಳಿಗೆಗಾಗಿ ಶ್ರಮಿಸುವುದಾಗಿ ಹೇಳಿದರು. ಈ ಮೂಲಕ ಕೇರಳ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ನಾಯಕತ್ವದ ಗೊಂದಲವನ್ನು ಪರಿಹರಿಸಿ, ಎಲ್ಲರೂ ಒಗ್ಗಟ್ಟಾಗಿ ಹೊಸ ಸರ್ಕಾರ ರಚನೆಯತ್ತ ಮುನ್ನಡೆಯುವ ಸಂದೇಶವನ್ನು ಅವರು ನೀಡಿದ್ದಾರೆ.
ಏಪ್ರಿಲ್ 9ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ವೇಣುಗೋಪಾಲ್ ಸ್ಪರ್ಧಿಸಲಿಲ್ಲ. ಅವರು ಅಲಪ್ಪುಳಂ ಲೋಕಸಭಾ ಕ್ಷೇತ್ರದಿಂದ ಸಂಸರಾಗಿ ಆಯ್ಕೆಯಾಗಿದ್ದಾರೆ. ಆದಾಗ್ಯೂ, ಪಕ್ಷದ ಕಾರ್ಯಕರ್ತರ ಒಂದು ಭಾಗ ಮತ್ತು ಶಾಸಕರು, ಹಿರಿಯ ನಾಯಕರ ಬೆಂಬಲ ನೀಡಿದ ಹಿನ್ನೆಲೆ ಉನ್ನತ ಹುದ್ದೆಗೆ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು (ಏಜೆನ್ಸೀಸ್).