ಸುಪ್ರಿಯಾ ಸುಳೆಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಸಂಸದ ರಾವುತ್?  
ದೇಶ

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಿದ್ರೆ ಇಂಡಿಯಾ ಒಕ್ಕೂಟಕ್ಕೆ ದ್ರೋಹ! ಸುಪ್ರಿಯಾ ಸುಳೆಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಸಂಸದ ರಾವುತ್? | Delimitation Bill

ಮುಂಬೈ: ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮಸೂದೆ ವಿಚಾರವಾಗಿ ಎನ್‌ಡಿಎ ಕೂಟಕ್ಕೆ ಬೆಂಬಲ ನೀಡುವ ಪಕ್ಷವು ಇಂಡಿಯಾ ಮೈತ್ರಿಗೆ ದ್ರೋಹ ಬಗೆದಂತೆ ಆಗುತ್ತದೆ. ಆದ್ದರಿಂದ ಅಂತಹ ಪಕ್ಷಗಳು ಮೈತ್ರಿಕೂಟದಿಂದ ಹೊರನಡೆಯಬೇಕು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಅವರು ಎನ್‌ಡಿಎ ಸೇರದೆ ಮಸೂದೆಗೆ ಬೆಂಬಲ ನೀಡಬಹುದೆಂಬ ಚರ್ಚೆಗಳ ನಡುವೆ ರಾವುತ್​ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಶರದ್ ಪವಾರ್ ಅಥವಾ ಸುಪ್ರಿಯಾ ಸುಳೆ ಅವರು ಎನ್‌ಡಿಎ ಜೊತೆ ಕೈಜೋಡಿಸುತ್ತಾರೆ ಎಂಬುದನ್ನು ನಾನು ನಂಬುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಹೋರಾಡುತ್ತಲೇ ಪವಾರ್ ತಮ್ಮ ರಾಜಕೀಯ ಜೀವನದ ಬಹುಭಾಗ ಕಳೆದಿದ್ದಾರೆ. ಮಹಾತ್ಮ ಜ್ಯೋತಿರಾವ್ ಫುಲೆ, ಛತ್ರಪತಿ ಶಾಹು ಮಹಾರಾಜ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಗತಿಪರ ವಿಚಾರಗಳನ್ನು ಮಹಾರಾಷ್ಟ್ರದಲ್ಲಿ ಪಸರಿಸಲು ಪವಾರ್ ಶ್ರಮಿಸಿದ್ದಾರೆ. ದೇಶ ಮತ್ತು ಮಹಾರಾಷ್ಟ್ರಕ್ಕೆ ಹಾನಿ ಮಾಡುವ ಶಕ್ತಿಗಳ ಜೊತೆ ಪವಾರ್ ಅಥವಾ ಸುಪ್ರಿಯಾ ಸುಳೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಸೂದೆಗೆ ಬೆಂಬಲ ನೀಡುವ ವಿಚಾರದಲ್ಲಿ ದ್ವಂದ್ವ ನಿಲುವು ಸಾಧ್ಯವಿಲ್ಲ ಎಂದ ರಾವುತ್, ಯಾವುದೇ ಪಕ್ಷವು ಈ ವಿಚಾರದಲ್ಲಿ ಎನ್‌ಡಿಎಗೆ ಬೆಂಬಲ ನೀಡಲು ಬಯಸಿದರೆ, ಅದು ಇಂಡಿಯಾ ಮೈತ್ರಿಯಿಂದ ಹೊರಬರಬೇಕು. ಒಕ್ಕೂಟದಲ್ಲಿದ್ದುಕೊಂಡೇ ಇಂತಹ ವಿಷಯದಲ್ಲಿ ಎನ್‌ಡಿಎಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು ವಿಪಕ್ಷ ಪಾಳಯದಲ್ಲಿ ಮೂಡುತ್ತಿರುವ ಭಿನ್ನಾಭಿಪ್ರಾಯಗಳನ್ನು ಈ ಹೇಳಿಕೆ ಎತ್ತಿ ತೋರಿಸಿದೆ.

ರಾಹುಲ್ ನಾರ್ವೇಕರ್‌ಗೆ ಸವಾಲು!

ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾವುತ್, ಆರೋಪಗಳು ಸುಳ್ಳಾಗಿದ್ದರೆ ನಾರ್ವೇಕರ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಅಥವಾ ಎಫ್‌ಐಆರ್ ದಾಖಲಿಸಲಿ ಎಂದು ಸವಾಲು ಹಾಕಿದರು. ಖಂಡಿತವಾಗಿಯೂ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಅಥವಾ ಎಫ್‌ಐಆರ್ ದಾಖಲಿಸಲಿ. ನಾನು ಅವರಿಗೆ ಹೆದರುತ್ತೇನೆಯೇ? ಎಂದು ಪ್ರಶ್ನಿಸಿದರು. ನಾರ್ವೇಕರ್ ಕುಟುಂಬ ಖರೀದಿಸಿದ ಜಮೀನಿನಲ್ಲಿ ವಾಸವಿದ್ದ ಆದಿವಾಸಿ ಸಮುದಾಯದ ಸುಮಾರು 20 ಜನರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದೆ ಎಂದು ಶಿವಸೇನೆ ನಾಯಕ ಆರೋಪಿಸಿದರು.

50 ಲಕ್ಷ ರೂ. ವಹಿವಾಟು ತನಿಖೆಗೆ ಆಗ್ರಹ!

ಬಿಎಂಸಿ ಚುನಾವಣೆ ವೇಳೆ ಕೊಲಾಬಾ ಭಾಗದ ಪದಾಧಿಕಾರಿಯೊಬ್ಬರಿಗೆ 50 ಲಕ್ಷ ರೂಪಾಯಿ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ಬಣದ ನಾಯಕರ ವಿರುದ್ಧವೂ ರಾವುತ್ ವಾಗ್ದಾಳಿ ನಡೆಸಿದರು. ಎಂಎನ್‌ಎಸ್ ನಾಯಕ ಸಂದೀಪ್ ದೇಶಪಾಂಡೆ ಹಂಚಿಕೊಂಡ ವಿಡಿಯೋ ಉಲ್ಲೇಖಿಸಿ, ಹಣ ಪಾವತಿಸಿದವರು ಯಾರು, ಹಣ ಎಲ್ಲಿಂದ ಬಂತು ಮತ್ತು ಚುನಾವಣೆಯಲ್ಲಿ ಇಡೀ ಕುಟುಂಬ ಸಕ್ರಿಯವಾಗಿದ್ದ ಕೊಲಾಬಾ ನಾಯಕ ಯಾರು ಎಂದು ಪ್ರಶ್ನಿಸಿದರು. ಅಧಿಕೃತ 50 ಲಕ್ಷ ರೂ. ವಹಿವಾಟು ಸಂಬಂಧ ತಮ್ಮನ್ನು ಇಡಿ ಬಂಧಿಸಿ ಜೈಲಿಗೆ ಕಳುಹಿಸಿತ್ತು ಎಂದು ನೆನಪಿಸಿದ ರಾವುತ್, ಈ ಪ್ರಕರಣವನ್ನು ಇಡಿ ಮತ್ತು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸಬೇಕು ಹಾಗೂ ಹಣದ ಮೂಲ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು(ಏಜೆನ್ಸೀಸ್​).