ಡ್ರೋನ್ ಮೂಲಕ ಔಷಧ ವಿತರಣೆ ಯೋಜನೆ
- ಡ್ರೋನ್‌ಗಳ ಮೂಲಕ ಔಷಧಿಗಳ ಸಪ್ಲೈ
- ಆಂಧ್ರ ಆರೋಗ್ಯ ಇಲಾಖೆಯ ಪ್ರಮುಖ ಒಪ್ಪಂದ
- ಬುಡಕಟ್ಟು ಪ್ರದೇಶದ ಆಸ್ಪತ್ರೆಗಳಿಗೆ ಔಷಧಿಗಳ ಪೂರೈಕೆ
- ಖಾಸಗಿ ಕಂಪನಿ ಜತೆ ಕೈಜೋಡಿಸಿದ ಆರೋಗ್ಯ ಇಲಾಖೆ
ಹೈದರಾಬಾದ್: ಬುಡಕಟ್ಟು ಪ್ರದೇಶಗಳ ಜನರಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇದೀಗ ಆಂಧ್ರಪ್ರದೇಶ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ರಾಜ್ಯದ ಬುಡಕಟ್ಟು ಪ್ರದೇಶಗಳ ಆಸ್ಪತ್ರೆಗಳಿಗೆ ಡ್ರೋನ್‌ಗಳ ಮೂಲಕ ಔಷಧಿಗಳನ್ನು ಪೂರೈಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ, ಬುಡಕಟ್ಟು ಪ್ರದೇಶಗಳಲ್ಲಿರುವ ಆಸ್ಪತ್ರೆಗಳಿಗೆ ಡ್ರೋನ್ ಮುಖಾಂತರ ಔಷಧಿಗಳ ಪೂರೈಕೆಯಾಗಲಿದ್ದು, ಮುಂದಿನ ತಿಂಗಳ ಅಂತ್ಯದಿಂದ ಅಧಿಕೃತವಾಗಿ ಪ್ರಾರಂಭಿಸಲು ಇಲಾಖೆ ಮುಂದಾಗಿದೆ.
ಭವಿಷ್ಯದಲ್ಲಿ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯಿಂದ (ಕೆಜಿಹೆಚ್) ಪಾಡೇರಿಗೆ ಈ ಡ್ರೋನ್ ಸೇವೆಯನ್ನು ವಿಸ್ತರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಡ್ರೋನ್‌ಗಳ ಮೂಲಕ ಔಷಧಿಗಳ ಪೂರೈಕೆಯೊಂದಿಗೆ, ದೂರದ ಪ್ರದೇಶಗಳ ಬುಡಕಟ್ಟು ಆಸ್ಪತ್ರೆಗಳನ್ನು ಸುಲಭವಾಗಿ ತಲುಪಲು ಇದು ಸಾಧ್ಯವಾಗುತ್ತದೆ. ಗುಡ್ಡಗಾಡು ಪ್ರದೇಶಗಳು ಮತ್ತು ರಸ್ತೆ ಸೌಲಭ್ಯಗಳು ಸರಿಯಾಗಿಲ್ಲದ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಔಷಧಿಗಳು ಲಭ್ಯವಿಲ್ಲ. ಈ ಎಲ್ಲ ವಿಷಯಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಈ ಯೋಜನೆ ಬುಡಕಟ್ಟು ಜನಗಳಿಗೆ ಉತ್ತಮ ಆರೋಗ್ಯ ಸೇವೆ ಮತ್ತು ಗುಣಮಟ್ಟವನ್ನು ಒದಗಿಸುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜನರಿಗೆ ಸಕಾಲಿಕ ವೈದ್ಯಕೀಯ ನೆರವು ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂಬುದನ್ನೂ ಒತ್ತಿ ಹೇಳಿದೆ,(ಏಜೆನ್ಸೀಸ್).