ಮಥುರಾ: ಉತ್ತರ ಪ್ರದೇಶದ ಪವಿತ್ರ ನಗರಿ ಮಥುರಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಆಯೋಜಿಸಲಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಕಾರ್ಯಕ್ರಮವು ಸ್ಥಳೀಯ ಅರ್ಚಕರು ಮತ್ತು ಧಾರ್ಮಿಕ ಸಂಘಟನೆಗಳ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಇದೀಗ ರದ್ದಾಗಿದೆ.
ಮಥುರಾದ ಖಾಸಗಿ ಹೋಟೆಲ್ ಮತ್ತು ಬಾರ್ ಒಂದರಲ್ಲಿ ಜನವರಿ 1ರಂದು ಸನ್ನಿ ಲಿಯೋನ್ ಅವರ ಡಿಜೆ (DJ) ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಮಥುರಾದ ಅರ್ಚಕರು ಮತ್ತು ಸಾಧು-ಸಂತರು ಕೆರಳಿದ್ದಾರೆ. ಶ್ರೀಕೃಷ್ಣ ಜನ್ಮಭೂಮಿ ಹೋರಾಟದ ಪ್ರಮುಖ ಅರ್ಚಕ ದಿನೇಶ್ ಫಲಾಹರಿ ಮಹಾರಾಜ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈ ಕಾರ್ಯಕ್ರಮವನ್ನು ತಕ್ಷಣವೇ ನಿಷೇಧಿಸುವಂತೆ ಒತ್ತಾಯಿಸಿದ್ದರು.
ವಿರೋಧಕ್ಕೆ ಕಾರಣವೇನು?
"ಮಥುರಾ ಮತ್ತು ಬೃಜ ಭೂಮಿ ಅತ್ಯಂತ ಪವಿತ್ರವಾದವು. ಇಲ್ಲಿ ಭಕ್ತರು ಭಜನೆ, ಪೂಜೆ ಮತ್ತು ಆಧ್ಯಾತ್ಮಿಕ ಶಾಂತಿಗಾಗಿ ಬರುತ್ತಾರೆ. ಇಂತಹ ದೈವಿಕ ಭೂಮಿಯಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸಲು ನಾವು ಬಿಡುವುದಿಲ್ಲ" ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ನಿ ಲಿಯೋನ್ ಅವರ ಪೂರ್ವಾಶ್ರಮದ ವೃತ್ತಿಜೀವನವನ್ನು ಉಲ್ಲೇಖಿಸಿರುವ ಅವರು, ಅಂತಹ ನಟಿಯ ಕಾರ್ಯಕ್ರಮವು ಬೃಜ ಭೂಮಿಯ ಸಂಸ್ಕೃತಿಗೆ ಕಪ್ಪುಚುಕ್ಕೆ ಎಂದಿದ್ದಾರೆ.
ಆಯೋಜಕರ ನಿರ್ಧಾರ
ಮೊದಲಿಗೆ ಕಾರ್ಯಕ್ರಮಕ್ಕೆ ಎಲ್ಲಾ ಕಾನೂನುಬದ್ಧ ಅನುಮತಿಗಳನ್ನು ಪಡೆಯಲಾಗಿತ್ತು ಮತ್ತು ಕೇವಲ 300 ಜನರ ಸೀಮಿತ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದು ಹೋಟೆಲ್ ಮಾಲೀಕ ಮಿತುಲ್ ಪಾಠಕ್ ತಿಳಿಸಿದ್ದಾರೆ. ಆದಾಗ್ಯೂ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಮತ್ತು ಸ್ಥಳೀಯ ಪ್ರತಿಭಟನೆಗೆ ಗೌರವ ಸಲ್ಲಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).