Sunetra Pawar | ಉಪಮುಖ್ಯಮಂತ್ರಿ ಸುನೇತ್ರಾ ಪವಾರ್
ಪುಣೆ: ಮಹಾರಾಷ್ಟ್ರದ ರಾಜಕೀಯದ ಕೇಂದ್ರಬಿಂದುವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ತಮ್ಮ ಸ್ಪರ್ಧೆಯ ಕುರಿತು ಇತ್ತೀಚೆಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಪವಾರ್ ಕುಟುಂಬದ ಪ್ರತಿಷ್ಠೆಯ ಕಣವಾಗಿರುವ ಬಾರಾಮತಿಯಲ್ಲಿ ಚುನಾವಣೆಯನ್ನು ಅವಿರೋಧವಾಗಿ ನಡೆಸುವ ಕುರಿತು ವಿವಿಧ ರಾಜಕೀಯ ಪಕ್ಷಗಳ ನಡುವೆ ಗಂಭೀರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ನಾಯಕರು ಈ ಕ್ಷೇತ್ರದಲ್ಲಿ ಯಾವ ಪಕ್ಷದ ಸ್ಪರ್ಧೆಯಿಲ್ಲದೆ ಅವಿರೋಧ ಆಯ್ಕೆ ನಡೆಯಲಿ ಎಂಬ ಆಶಯ ಹೊಂದಿದ್ದಾರೆ ಎಂದು ವರದಿಯಾಗಿದೆ.
ಇತ್ತ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಕೂಡ ಇದೇ ರೀತಿಯ ನಿಲುವನ್ನು ತಳೆದಿದ್ದು, ಸುನೇತ್ರಾ ಅವರ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವ ಸಾಧ್ಯತೆ ದಟ್ಟವಾಗಿದೆ. ಬಾರಾಮತಿಯನ್ನು ದಶಕಗಳಿಂದಲೂ ಪವಾರ್ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, ಕುಟುಂಬದೊಳಗಿನ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ವಿರೋಧ ಪಕ್ಷಗಳು ಈ ನಿರ್ಧಾರಕ್ಕೆ ಬರಲಿವೆ ಎನ್ನಲಾಗುತ್ತಿದೆ.
ಇಷ್ಟೆಲ್ಲಾ ಚರ್ಚೆಗಳಿದ್ದರು ಸಂಪೂರ್ಣ ಸ್ಪಷ್ಟನೆ ಸಿಕ್ಕಿಲ್ಲ, ಒಂದು ವೇಳೆ ತನ್ನ ಮಿತ್ರಪಕ್ಷಗಳಾದ ಎನ್‌ಸಿಪಿ (ಎಸ್ಪಿ) ಅಥವಾ ಶಿವಸೇನೆ (ಯುಬಿಟಿ) ಸ್ಪರ್ಧಿಸಲು ನಿರಾಕರಿಸಿದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸುಳಿವು ನೀಡಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್, ಪಕ್ಷವು ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದು, ಅಗತ್ಯಬಿದ್ದರೆ ಚುನಾವಣಾ ಕಣಕ್ಕೆ ಮಧ್ಯಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ.
ವರ್ಷದ ಆರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನ ಹೊಂದಿದ ಬಳಿಕ ಬಾರಾಮತಿ ಕ್ಷೇತ್ರ ಖಾಲಿಯಾಗಿದ್ದು, ಇದರಿಂದಾಗಿ ಈ ಉಪಚುನಾವಣೆ ಅನಿವಾರ್ಯವಾಗಿದೆ. ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸುನೇತ್ರಾ ಪವಾರ್ ಅವರೇ ಸ್ಪರ್ಧಿಸುವ ನಿರೀಕ್ಷೆಯಿದ್ದು, ಸಚಿವ ಸ್ಥಾನದಲ್ಲಿ ಮುಂದುವರಿಯಬೇಕಾದರೆ ನಿಯಮದಂತೆ ಆರು ತಿಂಗಳೊಳಗೆ ಶಾಸಕಿಯಾಗಿ ಆಯ್ಕೆಯಾಗಬೇಕಿದೆ(ಏಜೆನ್ಸೀಸ್).