ಎರ್ನಾಕುಲಂ ಸಹಾಯಕ ಕಲೆಕ್ಟರ್ ಪಾರ್ವತಿ ಗೋಪಕುಮಾರ್ 
ದೇಶ

ಬಸ್​​ ಹರಿದು ಬಲಗೈ ಕಟ್ ಆದ್ರೂ ತನ್ನ ಕನಸಿನ ಬೆನ್ನೇರಿ IAS ಸಾಧನೆ ಮಾಡಿದ ಪಾರ್ವತಿಯ ಯಶೋಗಾಥೆ! Success Story

ಪ್ರಮುಖ ಮುಖ್ಯಾಂಶಗಳು

  • ಯಶಸ್ಸು ಅನ್ನೋದು ರಾತ್ರೋರಾತ್ರಿ ಬರುವಂಥದ್ದಲ್ಲ, ಅದರ ಹಿಂದೆ ಸಾಕಷ್ಟು ಶ್ರಮ ಇರುತ್ತದೆ
  • ನಿದ್ದೆಯಿಲ್ಲದ ರಾತ್ರಿಗಳು, ಖಾಲಿ ಹೊಟ್ಟೆಯಲ್ಲಿ ನಡೆದ ಹಾದಿಗಳು, ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ
  • ಯಾವಾಗ ಯಶಸ್ಸು ನಿಮ್ಮದಾಗುತ್ತೋ ಆಗ ನಿಮ್ಮ ಬಗ್ಗೆ ಎಲ್ಲರು ಮಾತನಾಡುತ್ತಾರೆ
  • ಐಎಎಸ್​ ಅಧಿಕಾರಿ ಪಾರ್ವತಿ ಗೋಪಕುಮಾರ್ ಹಿಂದೆ ಒಂದು ಸ್ಫೂರ್ತಿಯ ಕತೆಯಿದೆ
Success Story : ಯಶಸ್ಸು ಅನ್ನೋದು ರಾತ್ರೋರಾತ್ರಿ ಬರುವಂಥದ್ದಲ್ಲ, ಅದರ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ಅನೇಕ ಕಷ್ಟಗಳನ್ನು ದಾಟ ಬೇಕಾಗುತ್ತದೆ. ನಿದ್ದೆಯಿಲ್ಲದ ರಾತ್ರಿಗಳು, ಖಾಲಿ ಹೊಟ್ಟೆಯಲ್ಲಿ ನಡೆದ ಹಾದಿಗಳು ಹಾಗೂ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ಈ ಜಗತ್ತು ನಮ್ಮನ್ನು ಗುರುತಿಸುವುದೇ ಇಲ್ಲ. ಯಾವಾಗ ಯಶಸ್ಸು ನಿಮ್ಮದಾಗುತ್ತೋ ಆಗ ನಿಮ್ಮ ಬಗ್ಗೆ ಎಲ್ಲರು ಮಾತನಾಡುತ್ತಾರೆ ಮತ್ತು ನಿಮ್ಮ ಬೆನ್ನು ತಟ್ಟುತ್ತಾರೆ. ಅಂಥದ್ದೇ ಯಶೋಗಾಥೆಯನ್ನು ನಾವಿಂದು ನಿಮಗೆ ತಿಳಿಸುತ್ತೇವೆ.
ಪ್ರಸ್ತುತ ಎರ್ನಾಕುಲಂ ಸಹಾಯಕ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಪಾರ್ವತಿ ಗೋಪಕುಮಾರ್ ಹಿಂದೆ ಒಂದು ಸ್ಫೂರ್ತಿಯ ಕತೆಯಿದೆ. ಎಲ್ಲ ಕಷ್ಟಗಳನ್ನು ದಾಟಿ ನಾಗರಿಕ ಸೇವೆಗೆ ಸೇರುವ ಮೂಲಕ ತಮ್ಮ ಬಹುದಿನಗಳ ಕನಸನ್ನು ಸಾಧಿಸಿದ್ದಾರೆ. ತಮ್ಮ ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ, ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯಿಂದ ಚೇತರಿಸಿಕೊಂಡ ಪಾರ್ವತಿ, ಇಂದು ಉನ್ನತ ಸ್ಥಾನವನ್ನು ತಲುಪಿದ್ದಾರೆ.
ಅಂದಹಾಗೆ, ಪಾರ್ವತಿ ಅವರು 2010ರಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಖುಷಿ ಖುಷಿಯಾಗಿ ಸಾಗುತ್ತಿದ್ದ ಜೀವನದಲ್ಲಿ ಆ ಒಂದು ಘಟನೆ ಪಾರ್ವತಿ ಅವರನ್ನು ಚಿಂತೆಗೆ ದೂಡಿತು. ತಮ್ಮ ತಂದೆಯ ಬೈಕ್ ಏರಿ ಶಾಲೆಗೆ ಬರುವಾಗ ರಸ್ತೆಯಲ್ಲಿ ಸಂಭವಿಸಿದ ಅಪಘಾತದಿಂದ ಪಾರ್ವತಿ ಅವರು ತಮ್ಮ ಬಲಗೈ ಕಳೆದುಕೊಂಡರು. ಬೈಕ್​, ಕಾರಿಗೆ ಡಿಕ್ಕಿ ಹೊಡೆದ ನಂತರ ಪಾರ್ವತಿ ರಸ್ತೆ ಮೇಲೆ ಬಿದ್ದರು. ಇದೇ ವೇಳೆ ಪಾರ್ವತಿ ಅವರ ಬಲಗೈ ಮೇಲೆ ಕೆಎಸ್ಆರ್​ಟಿಸಿ ಬಸ್ ಚಕ್ರ ಹರಿಯಿತು. ಇದರಿಂದ ಬಲಗೈ ಕಳೆದುಕೊಳ್ಳಬೇಕಾಯಿತು.
ಓದುವುದರಲ್ಲಿ ನಿಪುಣಳಾಗಿದ್ದ ಪಾರ್ವತಿ, ಅನಿರೀಕ್ಷಿತ ಅಪಘಾತದಿಂದ ಸಂಪೂರ್ಣವಾಗಿ ನಲುಗಿಹೋದಳು. ಆದರೆ, ತನ್ನ ಓದನ್ನು ಬಿಟ್ಟುಕೊಡಲು ಪಾರ್ವತಿ ಸಿದ್ಧಳಿರಲಿಲ್ಲ. ಗಾಯ ವಾಸಿಯಾಗುವ ಮೊದಲೇ, ಆಕೆ ಏಳನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಹಾಜರಾದಳು. ತನ್ನ ಬಲಗೈ ಕತ್ತರಿಸಿದ್ದರಿಂದ ಸಾಕಷ್ಟು ಕಷ್ಟಪಡಬೇಕಾಯಿತು. ಸುಮಾರು ಒಂದು ವರ್ಷದ ಕಠಿಣ ಪರಿಶ್ರಮ ಹಾಕಿ, ತನ್ನ ಎಡಗೈಯಿಂದ ಬರೆಯಲು ಪ್ರಾರಂಭಿಸಿದಳು. ಒಂಬತ್ತನೇ ತರಗತಿಯಲ್ಲಿ ಹಾಸ್ಟೆಲ್‌ಗೆ ಸೇರಿದ ನಂತರ, ತನ್ನ ಒಂದು ಕೈಯಿಂದ ತನ್ನ ಸ್ವಂತ ವ್ಯವಹಾರಗಳನ್ನು ನೋಡಿಕೊಳ್ಳಲು ಕಲಿತಳು. ಹತ್ತನೇ ತರಗತಿಯಲ್ಲಿ, ಗಣಿತವನ್ನು ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‌ನೊಂದಿಗೆ ಉತ್ತೀರ್ಣಳಾದಳು. ನಂತರ ಆಕೆ ಅಂಬಲಪುಳ ಮಾಡೆಲ್ ಹೈಯರ್ ಸೆಕೆಂಡರಿ ಶಾಲೆಯಿಂದ ದ್ವಿತೀಯ ಪಿಯುಸಿಯಲ್ಲಿ ಪೂರ್ಣ ಅಂಕಗಳೊಂದಿಗೆ ಉತ್ತೀರ್ಣಳಾದಳು.
ಇದಾದ ನಂತರ, ಎಲ್‌ಎಲ್‌ಬಿ ಕನಸು ಹೊತ್ತು, ಕುಸಾಟ್ ಎಲ್‌ಎಲ್‌ಬಿ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ಸಿಎಲ್‌ಎಟಿ ಪ್ರವೇಶ ಪರೀಕ್ಷೆಯಲ್ಲಿ 200ನೇ ರ‍್ಯಾಂಕ್ ಗಳಿಸಿದರು. 2021ರಲ್ಲಿ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯಿಂದ ಕಾನೂನು ಪದವಿ ಪಡೆದರು. ಈ ಸಮಯದಲ್ಲಿ ಆಲಪ್ಪುಳದ ಸಬ್-ಕಲೆಕ್ಟರ್ ಕೃಷ್ಣತೇಜ ಅವರು ಅವರನ್ನು ಐಎಎಸ್ ಅಧಿಕಾರಿಯಾಗಲು ಪ್ರೇರೇಪಿಸಿದರು. 2022 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಬಳಿಕ ತಮ್ಮ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಈ ಮೂಲಕ ಕೇರಳ ಕೇಡರ್‌ನಲ್ಲಿ 282ನೇ ರ‍್ಯಾಂಕ್‌ನೊಂದಿಗೆ ಐಎಎಸ್ ಪಡೆದರು. 2024 ರ ಬ್ಯಾಚ್‌ನ ಐದು ಐಎಎಸ್ ತರಬೇತಿದಾರರಲ್ಲಿ ಕೇರಳ ಕೇಡರ್‌ಗೆ ನೇಮಕಗೊಂಡ ಏಕೈಕ ಮಲಯಾಳಿ ಪಾರ್ವತಿಯಾಗಿದ್ದಾರೆ, (ಏಜೆನ್ಸೀಸ್​).