ಒಂದೆಡೆ ಸಂಸಾರದ ನೊಗ, ಮತ್ತೊಂದೆಡೆ ಸಾಧನೆಯ ತುಡಿತ: ಛಲಬಿಡದೆ ಸಿವಿಲ್ ಜಡ್ಜ್ ಆದ ಗೃಹಿಣಿಯ ಯಶೋಗಾಥೆ! Success Story
- ಏಳು ವರ್ಷಗಳ ಪರಿಶ್ರಮದ ಬಳಿಕ ಸಿವಿಲ್ ನ್ಯಾಯಾಧೀಶೆಯಾದ ಗೃಹಿಣಿ ದೀಪು ಕನ್ವರ್
- 19ನೇ ವಯಸ್ಸಿನಲ್ಲಿ ಮದುವೆ ಹಾಗೂ ಮಾತೃತ್ವದ ನಡುವೆಯೂ ಮುಂದುವರಿದ ಕಾನೂನು ಶಿಕ್ಷಣ
- ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹದಿಂದ ಗುರಿ ತಲುಪಿದ ರಾಜಸ್ಥಾನದ ಸಾಧಕಿ
- 2022 ಹಾಗೂ 2023ರ ಸೋಲುಗಳನ್ನು ಮೆಟ್ಟಿ ನಿಂತು 79ನೇ ರ್ಯಾಂಕ್ ಗಳಿಕೆ
- ಸಂಸಾರದ ಜವಾಬ್ದಾರಿಯೊಂದಿಗೆ ಕನಸನ್ನು ನನಸು ಮಾಡಿಕೊಂಡ ಸ್ಫೂರ್ತಿದಾಯಕ ಯಶೋಗಾಥೆ
Success Story : ಕಳೆದ ಏಳು ವರ್ಷಗಳ ಸುದೀರ್ಘ ಪರಿಶ್ರಮ, ತ್ಯಾಗ ಮತ್ತು ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ರಾಜಸ್ಥಾನದ ಬರ್ಮರ್ ಮೂಲದ ಗೃಹಿಣಿ ದೀಪು ಕನ್ವರ್ ಎಂಬುವರು ಸಿವಿಲ್ ನ್ಯಾಯಾಧೀಶೆ ಆಗಿ ಆಯ್ಕೆಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ನಾವು ಏನನ್ನಾದರೂ ಸಾಧಿಸಬೇಕೆಂದು ದೃಢವಾಗಿ ಬಯಸಿದರೆ, ಈ ಜಗತ್ತಿನಲ್ಲಿ ಸಾಧಿಸಲಾಗದ್ದು ಯಾವುದು ಇಲ್ಲ ಎಂಬ ದೀಪು ಅವರ ನುಡಿಗಳು ಅನೇಕ ಆಕಾಂಕ್ಷಿಗಳಿಗೆ ಸ್ಫೂರ್ತಿಯನ್ನು ನೀಡಿದೆ.
ಕೇವಲ 19ನೇ ವಯಸ್ಸಿನಲ್ಲಿ ವಿವಾಹವಾಗಿ, ಆ ಬಳಿಕ ತಾಯಿಯಾದ ದೀಪು ಕನ್ವರ್ ಅವರ ಜೀವನದಲ್ಲಿ ಜವಾಬ್ದಾರಿಗಳು ಬೆಟ್ಟದಷ್ಟಿದ್ದವು. 2019ರಲ್ಲಿ ಬಿ.ಕಾಮ್ ಓದುವ ಸಂದರ್ಭದಲ್ಲಿ ಲೋಕೇಂದ್ರ ಸಿಂಗ್ ಅವರೊಂದಿಗೆ ಮದುವೆಯಾದ ಬಳಿಕವೂ ಅವರ ಕಾನೂನು ಓದುವ ಕನಸು ನಿಲ್ಲಲಿಲ್ಲ. ಮನೆಯಲ್ಲಿ ವೃದ್ಧ ಪೋಷಕರ ನೋಡಿಕೊಳ್ಳುವ ಜವಾಬ್ದಾರಿ ಹಾಗೂ ಮಕ್ಕಳ ಲಾಲನೆ-ಪಾಲನೆಯ ಜಂಜಾಟಗಳ ನಡುವೆಯೂ ಗಂಡ ಮತ್ತು ಮಾವನವರ ಪ್ರೋತ್ಸಾಹದಿಂದ ದೀಪು ಅವರು ತಮ್ಮ ಗುರಿಯತ್ತ ಮುಖ ಮಾಡಿದರು. ಮದುವೆ ಮತ್ತು ಮಾತೃತ್ವದ ಜವಾಬ್ದಾರಿಯ ಜೊತೆಜೊತೆಗೆ ಎಲ್‌ಎಲ್‌ಬಿ (LLB) ಪದವಿ ಪೂರ್ಣಗೊಳಿಸಿದ ದೀಪು ಅವರು, ಗುಜರಾತ್ ಕಾನೂನು ಸೇವೆ ಪರೀಕ್ಷೆಗೆ ತೀವ್ರ ಸಿದ್ಧತೆ ನಡೆಸಿದರು.
ಯಶಸ್ಸಿನ ರಹಸ್ಯ ಸರಿಯಾದ ಸಿದ್ಧತೆ ಮತ್ತು ಉತ್ತಮ ಅಧ್ಯಯನ ಅಭ್ಯಾಸದಲ್ಲಿದೆ ಎಂಬುದನ್ನು ದೀಪು ಕನ್ವರ್ ಸಾಬೀತುಪಡಿಸಿದ್ದಾರೆ. ಮದುವೆಯಾದ ಮಹಿಳೆಯೊಬ್ಬಳು ಸಂಸಾರದ ನೊಗವನ್ನು ಹೊತ್ತುಕೊಂಡು ಓದುವುದು ಅಷ್ಟು ಸುಲಭವಲ್ಲ. ಮನೆಯ ಕೆಲಸಗಳು ಮತ್ತು ಸಂಸಾರದ ನಿರ್ವಹಣೆಯ ನಡುವೆ ಸಮಯ ಮಾಡಿಕೊಳ್ಳುವುದು ಕಷ್ಟಕರವಾದರೂ, ದೀಪು ಅವರ ಕುಟುಂಬದವರು ಅವರಿಗೆ ಬೆನ್ನೆಲುಬಾಗಿ ನಿಂತರು. ಮನೆಕೆಲಸಗಳಲ್ಲಿ ಬಿಜಿಯಾದಾಗಲೆಲ್ಲಾ ಆ ಕೆಲಸಗಳನ್ನು ಬಿಟ್ಟು ಓದಿಕೊಳ್ಳುವಂತೆ ಮನೆಯವರು ಪ್ರೋತ್ಸಾಹಿಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮ ಮತ್ತು ಕುಟುಂಬದವರ ಸಹಕಾರದ ಫಲವಾಗಿ ಇಂದು ಈ ದೊಡ್ಡ ಯಶಸ್ಸು ಸಾಧ್ಯವಾಗಿದೆ.
ಸಾಮಾನ್ಯವಾಗಿ ಅನೇಕರು ಕಠಿಣ ಪರಿಶ್ರಮದ ಬಳಿಕವೂ ಸೋಲುಂಡಾಗ ಧೃತಿಗೆಟ್ಟು ತಮ್ಮ ಕನಸುಗಳನ್ನು ಕೈಬಿಡುತ್ತಾರೆ. ಆದರೆ, ದೀಪು ಕನ್ವರ್ ಅವರು ಸೋಲುಗಳನ್ನು ಮೆಟ್ಟಿ ನಿಂತು ಗೆದ್ದ ಛಲಗಾರ್ತಿ. 2022ರಲ್ಲಿ ಮೊದಲ ಬಾರಿ ಪರೀಕ್ಷೆ ಬರೆದು ಪ್ರಿಲಿಮಿನರಿ ಹಂತ ಪಾಸ್ ಮಾಡಿದರೂ, ಸಂದರ್ಶನದಲ್ಲಿ ಸೋಲು ಕಂಡಿದ್ದರು. ನಂತರ 2023ರಲ್ಲೂ ಇದೇ ರೀತಿಯ ಹಿನ್ನಡೆಯನ್ನು ಎದುರಿಸಬೇಕಾಯಿತು. ಆದರೂ ಎದೆಗುಂದದ ಅವರು, ಕುಗ್ಗದೆ ಮತ್ತೆ ಹೋರಾಡಲು ನಿರ್ಧರಿಸಿ ಅತ್ಯುತ್ತಮವಾಗಿ ಓದಿಕೊಂಡರು. ಎರಡು ವರ್ಷಗಳ ಬಳಿಕ 2025ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆದು ತಮ್ಮ ಪರಿಶ್ರಮದ ಬಲದಿಂದ 79ನೇ ರ್ಯಾಂಕ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಅಂತಿಮವಾಗಿ ಸಂದರ್ಶನ ಸೇರಿದಂತೆ ಎಲ್ಲ ಹಂತಗಳ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿದ ದೀಪು ಕನ್ವರ್, ಸಿವಿಲ್ ಜಡ್ಜ್ ಕುರ್ಚಿಯನ್ನೇರುವ ಮೂಲಕ ತಮ್ಮ ಏಳು ವರ್ಷಗಳ ಕಾಯುವಿಕೆಯನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ಮನೆಗೆಲಸ ಹಾಗೂ ಅಧ್ಯಯನವನ್ನು ಹೇಗೆ ನಿಭಾಯಿಸಿದಿರಿ ಎಂದು ಕೇಳಿದಾಗ, ತಮ್ಮ ಈ ಎಲ್ಲಾ ಯಶಸ್ಸಿಗೆ ತಮ್ಮ ಕುಟುಂಬವೇ ನೇರ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ದೀಪು. ಸಂಸಾರದ ಜವಾಬ್ದಾರಿಯೊಂದಿಗೆ ಕನಸನ್ನು ನನಸು ಮಾಡಿಕೊಳ್ಳಬಹುದು ಎಂಬುದನ್ನು ಇವರು ನಿರೂಪಿಸಿದ್ದಾರೆ.
ದೀಪು ಕನ್ವರ್ ಅವರ ಈ ಅದ್ಭುತ ಯಶೋಗಾಥೆಯು ಕೇವಲ ರಾಜಸ್ಥಾನ ಅಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಗಳಲ್ಲಿರುವ ಲಕ್ಷಾಂತರ ಗೃಹಿಣಿಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದೆ. ಕಠಿಣ ಪರಿಶ್ರಮ, ಗುರಿಯ ಬಗ್ಗೆ ಸ್ಪಷ್ಟತೆ ಮತ್ತು ಕುಟುಂಬದ ಬೆಂಬಲವಿದ್ದರೆ ಜೀವನದಲ್ಲಿ ಯಾವುದೇ ಕಠಿಣ ಗುರಿಯನ್ನು ಸಾಧಿಸಬಹುದು ಎಂಬುದನ್ನು ಇವರು ಮತ್ತೊಮ್ಮೆ ಸಾಬೀತುಪಡಿಸಿ ತೋರಿಸಿದ್ದಾರೆ, (ಏಜೆನ್ಸೀಸ್).