- ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳು ನಡೆಸಿದ ಅಧ್ಯಯನ
- ತಾಪಮಾನದ ಹೆಚ್ಚಳದ ಹಿನ್ನೆಲೆ ವೇಗವಾಗಿ ಕರಗುತ್ತಿವೆ ಉತ್ತರಾಖಂಡದ ಒಟ್ಟು 23 ಪ್ರಮುಖ ಹಿಮನದಿಗಳು
- ಹೊಸ ಅಧ್ಯಯನದಲ್ಲಿ ಶಾಕಿಂಗ್ ಸಂಗತಿಗಳು ಬೆಳಕಿಗೆ
Uttarakhand Glaciers: ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ತಾಪಮಾನದ ಹೆಚ್ಚಳದ ಹಿನ್ನೆಲೆ ಉತ್ತರಾಖಂಡದ ಒಟ್ಟು 23 ಪ್ರಮುಖ ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂದು ವರದಿಯಾಗಿದೆ.
ಗರಿಷ್ಠ ತಾಪಮಾನದತ್ತ...
ಕನಿಷ್ಠ ತಾಪಮಾನ ಮೀರಿದ ಉಷ್ಣಾಂಶಕ್ಕೆ ಪ್ರತ್ಯೇಕ ಹಿಮನದಿಗಳ ಭೌಗೋಳಿಕ ಗುಣಲಕ್ಷಣಗಳು ವಿರುದ್ಧ ದಿಕ್ಕಿನಲ್ಲಿ ಸಾಗಲು ಆರಂಭಿಸಿವೆ. ಜ್ಯೋತಿ ಕುಮಾರಿ, ಗಿರೀಶ್ ಚಂದ್ರ ಕೋಥಿಯಾರಿ, ಅತುಲ್ ಕುಮಾರ್ ಪಾಟಿದಾರ್ ಮತ್ತು ಮನೀಶ್ ಮೆಹ್ತಾ ಎಂಬುವವರು ಡಿಸ್ಕವರ್ ಜಿಯೋಸೈನ್ಸ್ನಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ ಈ ಶಾಕಿಂಗ್ ವಿಷಯಗಳು ಹೊರಬಿದ್ದಿವೆ.
23 ಹಿಮನದಿಗಳ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದ್ದು, ಅವುಗಳ ಕರಗುವಿಕೆಯ ಹಿಂದಿನ ಅಂಶಗಳ ಬಗ್ಗೆ ಇಂಚಿಂಚೂ ಮಾಹಿತಿಯನ್ನು ದಾಖಲಿಸಲಾಗಿದೆ. ಅಧ್ಯಯನ ಮಾಡಿದ ಹಿಮನದಿಗಳಲ್ಲಿ, ತೆಹ್ರಿಯ ಖಟ್ಲಿಂಗ್ ವರ್ಷಕ್ಕೆ 88 ಮೀಟರ್ಗಳಷ್ಟು ಹಿಮ್ಮೆಟ್ಟುತ್ತಿರುವುದು ಕಂಡುಬಂದಿದೆ. ಪಿಥೋರಗಢ್ನಲ್ಲಿರುವ ಮಿಲಮ್ ವರ್ಷಕ್ಕೆ 32ರಿಂದ 37.8 ಮೀಟರ್ಗಳಷ್ಟು ಕರಗುತ್ತಿದ್ದರೆ, ರಮಣಿ ವರ್ಷಕ್ಕೆ 32 ಮೀಟರ್ಗಳಷ್ಟು ಕರಗುತ್ತಿದೆ.
ಇನ್ನು, ಗಂಗೋತ್ರಿಯು 1935ರಿಂದ 2004ರ ವರೆಗಿನ 69 ವರ್ಷಗಳ ದಾಖಲೆಯ ಮೇಲೆ ವರ್ಷಕ್ಕೆ 22.02 ಮೀಟರ್ಗಳ ಹಿಮ್ಮೆಟ್ಟುವಿಕೆಯ ದರವನ್ನು ತೋರಿಸಿದೆ. ಪ್ರತ್ಯೇಕ ಆರು ವರ್ಷಗಳ ದಾಖಲೆಯು ವರ್ಷಕ್ಕೆ 21.3 ಮೀಟರ್ಗಳ ದರವನ್ನು ತೋರಿಸಿದೆ. ಚಮೋಲಿಯಲ್ಲಿನ ಸತೋಪಂತ್ ವರ್ಷಕ್ಕೆ 26.45 ಮೀಟರ್ಗಳಷ್ಟು ಕರಗುತ್ತಿದ್ದರೆ, ಉತ್ತರ ನಂದಾ ದೇವಿ ವರ್ಷಕ್ಕೆ 22 ಮೀಟರ್ನಷ್ಟು ದಾಖಲಿಸಿದೆ.
ಅಧ್ಯಯನ ಮಾಡಿದ ಎರಡು ಅವಧಿಗಳ ಅಂತರದಲ್ಲಿ ಪಿಂಡಾರಿ ಗ್ಲೇಸಿಯರ್ ತನ್ನ ಹಿಮ್ಮೆಟ್ಟುವಿಕೆಯ ದರದಲ್ಲಿ ಹೆಚ್ಚಳವನ್ನು ತೋರಿಸಿದೆ. 1845ರಿಂದ 1966ರ ವರೆಗಿನ 121 ವರ್ಷಗಳ ದಾಖಲೆಯು 2,840 ಮೀಟರ್ ಅಥವಾ ವರ್ಷಕ್ಕೆ 23.4 ಮೀಟರ್ ಕರಗುವಿಕೆಯನ್ನು ತೋರಿಸಿದೆ. 2000 ಮತ್ತು 2018ರ ನಡುವೆ, ಇದು ವಾರ್ಷಿಕ 45.85 ಮೀಟರ್ ದರದಲ್ಲಿ 825.23 ಮೀಟರ್ಗಳಷ್ಟು ಹಿಮ್ಮೆಟ್ಟಿದೆ ಎಂದು ವರದಿಗಳು ಸೂಚಿಸಿವೆ.
ಇತರ ಹಿಮನದಿಗಳು
ಬಂದರ್ಪಂಚ್ ವರ್ಷಕ್ಕೆ 25.51 ಮೀಟರ್, ಚೋರಬರಿ 6.8 ಮೀಟರ್, ಡೋಕ್ರಿಯಾನಿ 21 ಮೀಟರ್, ಭಾಗೀರಥಿ 3.7 ಮೀಟರ್, ಟಿಪ್ರಾ 14.41 ಮೀಟರ್ ಮತ್ತು ಡುನಗಿರಿ 9 ಮೀಟರ್ ಸೇರಿದಂತೆ ಹಿಮ್ಮೆಟ್ಟುವಿಕೆಯ ದರಗಳನ್ನು ದಾಖಲಿಸಿವೆ.
ಶಿಲಾಖಂಡರಾಶಿಗಳಿಂದ ಆವೃತವಾದ ಹಿಮನದಿಗಳು ಸಾಮಾನ್ಯವಾಗಿ ಕ್ಲೀನ್-ಐಸ್ ಗ್ಲೇಶಿಯರ್ಗಳಿಗಿಂತ ಮಂದಗತಿಯಲ್ಲಿ ಕರಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಖಟ್ಲಿಂಗ್, ಮಿಲಮ್, ಗಂಗೋತ್ರಿ, ಸತೋಪಂಥ್, ರಮಣಿ ಮತ್ತು ಜೌಂಧರ್ ಹಿಮನದಿಗಳು ವಿಶೇಷವಾಗಿ ವೇಗವಾಗಿ ಹಿಮ್ಮೆಟ್ಟುವಿಕೆಯನ್ನು ಅನುಭವಿಸುತ್ತಿವೆ. ಹೆಚ್ಚುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಗಳೇ ಕರಗುವಿಕೆಗೆ ಮೂಲ ಕಾರಣ ಎನ್ನಲಾಗಿದೆ.
4,000 ಮೀಟರ್
ಪ್ರತ್ಯೇಕ ಹಿಮನದಿಗಳ ಆಕಾರ, ಇಳಿಜಾರು ಅವುಗಳ ಹಿಮ್ಮೆಟ್ಟುವಿಕೆಯ ಮೇಲೆ ಪ್ರಭಾವ ಬೀರಿದೆ. 2000ದಿಂದ ಪ್ರಸಕ್ತ ವರ್ಷದವರೆಗೆ ಹಿಮನದಿಗಳ ಕರಗುವಿಕೆಯ ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ ಎಂಬುದು ನಿಜಕ್ಕೂ ಅತ್ಯಂತ ಕಳವಳಕಾರಿ ವಿಷಯ. ಸಂಶೋಧಕರು ಮಳೆಯ ನಮೂನೆಗಳನ್ನು ಬದಲಾಯಿಸುವುದನ್ನು ಸೂಚಿಸಿದ್ದಾರೆ. ಈ ಹಿಂದೆ ಹಿಮ ಬಿದ್ದಿದ್ದ 4,000 ಮೀಟರ್ಗಳಷ್ಟು ಎತ್ತರದಲ್ಲಿ ಮಳೆ ಹೆಚ್ಚಾಗಿ ಸಂಭವಿಸುತ್ತದೆ. ಬೇಸಿಗೆ ಅಲ್ಲದ ಕಾಲದಲ್ಲೂ ಕಾಡುತ್ತಿರುವ ಬಿಸಿಲು ಮತ್ತು ಕ್ಷೀಣಿಸುತ್ತಿರುವ ಚಳಿಗಾಲದ ಹಿಮಪಾತವು ಹಿಮದ ಶೇಖರಣೆ ಮತ್ತು ಬಲವರ್ಧನೆಗೆ ಪೆಟ್ಟು ನೀಡಿದೆ.
ಗಂಗಾ, ಯಮುನಾ, ಬ್ರಹ್ಮಪುತ್ರ...
ಮುಂದುವರಿದ ಹಿಮನದಿಯ ನಷ್ಟವು ಹಿಮದ ಸರೋವರದ ಪ್ರಕೋಪ ಪ್ರವಾಹಗಳು, ಹಿಮಕುಸಿತಗಳು ಮತ್ತು ಶಿಲಾಖಂಡರಾಶಿಗಳ ಹರಿವುಗಳಿಂದ ಅಪಾಯಗಳನ್ನು ಸೃಷ್ಟಿಸಬಹುದು. ಹಿಮಾಲಯದ ಹಿಮನದಿಗಳು ನೀರಾವರಿ, ಕುಡಿಯುವ ಮತ್ತು ಜಲವಿದ್ಯುತ್ಗಾಗಿ ನೀರನ್ನು ಒದಗಿಸುತ್ತವೆ. ಉತ್ತರ ಭಾರತದ ಗಂಗಾ, ಯಮುನಾ, ಬ್ರಹ್ಮಪುತ್ರ, ಸಿಂಧೂ ಮತ್ತು ಅಲಕನಂದಾ ಸೇರಿದಂತೆ ಪ್ರಮುಖ ನದಿಗಳು ಈ ಪ್ರದೇಶಕ್ಕೆ ತೀರ ಸಮೀಪದಲ್ಲಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ,(ಏಜೆನ್ಸೀಸ್).