ಹೈದರಾಬಾದ್‌ನ ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ 2026ರ ಬ್ಯಾಚ್‌ನ ವಿದ್ಯಾರ್ಥಿಗಳು ವಕೀಲರಾಗಿ ನೋಂದಾಯಿಸಿಕೊಳ್ಳುವುದನ್ನು ತಡೆದು ಆದೇಶ ಹೊರಡಿಸಿದ್ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council Of India) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಭಾರತದ ಮುಖ್ಯ ನ್ಯಾಯಮೂರ್ತಿಗಳಿಂದ ತೀವ್ರ ತರಾಟೆಗೆ ಒಳಗಾದ ಬೆನ್ನಲ್ಲೇ ತಮ್ಮ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದಾರೆ. ವಿದ್ಯಾರ್ಥಿಗಳ ಆಲೋಚನಾ ಸ್ವಾತಂತ್ರ್ಯ ಮತ್ತು ಗೌರವವನ್ನು ಸದಾ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳ ಕಾಳಜಿ ಮುಖ್ಯ - ಪತ್ರದ ಮೂಲಕ ಕ್ಷಮೆಯಾಚನೆ
ಸಿಜೆಐ ಚಾಟಿ ಬೀಸಿದ ಬೆನ್ನಲ್ಲೇ ಶನಿವಾರ ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ಮನನ್ ಕುಮಾರ್ ಮಿಶ್ರಾ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದಾರೆ:
ಕಳೆದ ಕೆಲವು ದಿನಗಳ ಬೆಳವಣಿಗೆಗಳು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕವನ್ನುಂಟು ಮಾಡಿವೆ. ವಿದ್ಯಾರ್ಥಿಗಳಿಗೆ ನೋವಾದಾಗ ಅವರ ಕಾಳಜಿಗಳನ್ನು ತಾಳ್ಮೆ, ಸಂವೇದನಾಶೀಲತೆ ಮತ್ತು ಗೌರವದಿಂದ ಆಲಿಸಬೇಕು. ನನ್ನ ಮಾತುಗಳು ಅಥವಾ ಪತ್ರದಿಂದ ಕಾನೂನು ವಿದ್ಯಾರ್ಥಿಗಳ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ನಾನು ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ.
ವಿದ್ಯಾರ್ಥಿಗಳು ಸಂವಿಧಾನವನ್ನು ಅಭ್ಯಾಸ ಮಾಡುವವರು, ಅವರಿಗೆ ಇತರ ಯಾರೂ ನಿರ್ಧಾರಗಳನ್ನು ಬಲವಂತವಾಗಿ ಹೇರಬೇಕಿಲ್ಲ. ಶಾಂತಿಯುತ ಭಿನ್ನಾಭಿಪ್ರಾಯ, ಪ್ರಶ್ನೆ ಮಾಡುವುದು ಮತ್ತು ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳಾಗಿವೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಾನೂನು ವಿದ್ಯಾರ್ಥಿಗಳನ್ನು ಕಾನೂನು ಕ್ಷೇತ್ರದ ಭವಿಷ್ಯವೆಂದು ಪರಿಗಣಿಸುತ್ತದೆ. ಅವರ ಗೌರವ, ಸ್ವತಂತ್ರ ಆಲೋಚನೆ ಮತ್ತು ಕಾಳಜಿಗಳನ್ನು ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ.
ಈ ವಿವಾದವು ರಾಜಕೀಯ ಬಣ್ಣ ಪಡೆದುಕೊಳ್ಳದೆ, ವಿದ್ಯಾರ್ಥಿಗಳ ಸ್ವತಂತ್ರ ಚಿಂತನೆ ಮತ್ತು ಸಾಂವಿಧಾನಿಕ ಮೌಲ್ಯಗಳ ಗೌರವದೊಂದಿಗೆ ಶಮನಗೊಳ್ಳಲಿ ಎಂದು ಮನನ್ ಕುಮಾರ್ ಮಿಶ್ರಾ ಆಶಿಸಿದ್ದಾರೆ.
ಬಿಸಿಐ ಹೊರಡಿಸಿದ್ದ ಆದೇಶವೇನು..?
ನಲ್ಸಾರ್ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಸಿಜೆಐ ಸೂರ್ಯ ಕಾಂತ್ ಅವರನ್ನು ಆಹ್ವಾನಿಸುವುದಕ್ಕೆ ವಿದ್ಯಾರ್ಥಿಗಳ ಒಂದು ವಿಭಾಗ ವಿರೋಧ ವ್ಯಕ್ತಪಡಿಸಿತ್ತು. ಈ ನಡೆಯಿಂದ ಆಕ್ರೋಶಗೊಂಡ ಬಿಜೆಪಿ ರಾಜ್ಯಸಭಾ ಸಂಸದರೂ ಆಗಿರುವ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ನೇತೃತ್ವದ ಮಂಡಳಿಯು ಗುರುವಾರ ಆದೇಶವೊಂದನ್ನು ಹೊರಡಿಸಿತ್ತು. ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಗೌರವ ನೀಡದ ಕಾನೂನು ವಿದ್ಯಾರ್ಥಿಯು ಜವಾಬ್ದಾರಿಯುತ ವಕೀಲ, ಶಿಕ್ಷಕ ಅಥವಾ ನ್ಯಾಯಾಧೀಶನಾಗಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ನಿರ್ದೇಶನದವರೆಗೆ 2026ರ ಬ್ಯಾಚ್‌ನ ನಲ್ಸಾರ್ ವಿದ್ಯಾರ್ಥಿಗಳನ್ನು ವಕೀಲರಾಗಿ ನೋಂದಾಯಿಸಬಾರದು ಎಂದು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಸೂಚಿಸಲಾಗಿತ್ತು.
ಶುಕ್ರವಾರ ಈ ವಿಷಯದ ಕುರಿತು ಮಾತನಾಡಿದ ಸಿಜೆಐ ಸೂರ್ಯ ಕಾಂತ್, ಬಿಸಿಐ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದು ಸಂಪೂರ್ಣವಾಗಿ ಅನಗತ್ಯವಾದ ನಡೆ. ನಾನು ಕೂಡ ನನ್ನ ವಿದ್ಯಾರ್ಥಿ ಜೀವನದಲ್ಲಿ ಸಕ್ರಿಯವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದೆ. ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ. ಮಧ್ಯಪ್ರವೇಶಿಸಲು ಬಾರ್ ಕೌನ್ಸಿಲ್ ಯಾರು..? ಎಂದು ಪ್ರಶ್ನಿಸಿದ್ದರು.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆ ವೇಳೆ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ವಿನಂತಿಸಿದ್ದಾಗ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಮ್ಮ ಸಮಯ ವ್ಯರ್ಥ ಮಾಡಬೇಡಿ ಎಂದು ಹೇಳಿದ್ದರೆನ್ನಲಾದ ವಿಷಯ ವಿವಾದಕ್ಕೆ ಕಾರಣವಾಗಿತ್ತು. (ನಂತರ ಸಿಜೆಐ ಅವರು ತಾವು ಅರ್ಜಿ ವಿಚಾರಣೆಯನ್ನು ನಿರಾಕರಿಸಿಲ್ಲ, ಬದಲಿಗೆ ಸರಿಯಾದ ರೀತಿಯಲ್ಲಿ ಸಲ್ಲಿಸಲು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದರು).
ಈ ಘಟನೆಯನ್ನು ಪ್ರತಿಭಟಿಸಿ, ನಲ್ಸಾರ್ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಸಿಜೆಐ ಸೂರ್ಯ ಕಾಂತ್ ಅವರನ್ನು ಆಹ್ವಾನಿಸುವುದಕ್ಕೆ 2026ರ ಬ್ಯಾಚ್‌ನ ವಿದ್ಯಾರ್ಥಿಗಳ ಒಂದು ವಿಭಾಗ ವಿರೋಧ ವ್ಯಕ್ತಪಡಿಸಿತ್ತು(ಏಜೆನ್ಸೀಸ್).