- ಸೆಲೆಬ್ರಿಟಿ ಐಎಎಸ್ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಜಿಲ್ಲಾಧಿಕಾರಿ ಟೀನಾ ಡಾಬಿ
- ರೀಲ್ ಸ್ಟಾರ್ ಎಂದು ಕರೆದ್ದಿದ್ದಕ್ಕೆ ಬಂಧಿಸಿದ್ದಾರೆ ಎಂದು ವಿದ್ಯಾರ್ಥಿನಿಯರ ಆರೋಪ
- ಕಾಲೇಜಿನ ಪರೀಕ್ಷಾ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ ಮಾಡುವಾಗ ಘಟನೆ
ನವದೆಹಲಿ: ಸೆಲೆಬ್ರಿಟಿ ಐಎಎಸ್ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಜಿಲ್ಲಾಧಿಕಾರಿ ಟೀನಾ ಡಾಬಿ ( Tina Dabi ) ಅವರನ್ನು ರೀಲ್ ಸ್ಟಾರ್ ಎಂದು ಕರೆದ್ದಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯರನ್ನು ಬಂಧಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ರಾಜಸ್ಥಾನದ ಬರ್ಮರ್ನಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿಯರು, ಕಾಲೇಜಿನ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಬರ್ಮರ್ನ ಮಹಾರಾಣ ಭೂಪಲ್ ಕಾಲೇಜಿನ (ಎಂಬಿಸಿ) ಯುವತಿಯರ ಕಾಲೇಜಿನ ಮುಂದೆ ಶನಿವಾರ ನಾವು ಪ್ರತಿಭಟನೆ ಮಾಡುತ್ತಿದ್ದೆವು. ಈ ವಿಚಾರವಾಗಿ ಜಿಲ್ಲಾಧಿಕಾರಿ ಟೀನಾ ಡಾಬಿ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಬಯಸಿದ್ದೆವು. ಈ ಸಮಯದಲ್ಲಿ ಓರ್ವ ಅಧಿಕಾರಿ ನಮ್ಮ ಬಳಿ ಬಂದು ಟೀನಾ ಡಾಬಿ ಅವರು ನಿಮಗೆ ಸ್ಫೂರ್ತಿನಾ ಎಂದು ಕೇಳಿದಾಗ ಪರಿಸ್ಥಿತಿ ಬಿಗಡಾಯಿಸಿತು ಎಂದಿದ್ದಾರೆ.
ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಸಂಬಂಧ ಹೊಂದಿದ್ದ ಕೆಲವು ವಿದ್ಯಾರ್ಥಿಗಳು ಅಧಿಕಾರಿಯ ಮಾತನ್ನು ಒಪ್ಪಲಿಲ್ಲ. ನೀವು ಹೇಳಿದಂತೆ ನಿಮ್ಮ ಜಿಲ್ಲಾಧಿಕಾರಿ ನಮಗೆ ರೋಲ್ ಮಾಡೆಲ್ ಅಲ್ಲ. ಅವರೇನಾದರೂ ಇಲ್ಲಿ ಇದ್ದಿದ್ದರೆ, ವಿದ್ಯಾರ್ಥಿಗಳ ಬೇಡಿಕೆಗಳನ್ನು ಕೇಳಲು ಬರುತ್ತಿದ್ದರು. ಅವರೊಬ್ಬ ರೀಲ್ ಸ್ಟಾರ್. ರೀಲ್ಸ್ ಮಾಡಲು ಎಲ್ಲೋ ಹೋಗಿರಬೇಕು. ನಮ್ಮ ಸಮಸ್ಯೆಗಳ ಬಗ್ಗೆ ಮಾತ್ರ ಅವರು ಗಮನ ಹರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಾದ ನಂತರ ನಮ್ಮ ಪ್ರತಿಭಟನೆಗಳು ಮಗಿದ ಕೂಡಲೇ ನಮ್ಮನ್ನು ಬಂಧಿಸಲಾಯಿತು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ನಂತರ ಅನೇಕ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಸುತ್ತಲೂ ಜಮಾಯಿಸಿ, ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಆದರೆ, ಯಾರನ್ನೂ ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಹೇಳಿದರು.
ನಮ್ಮ ಪೊಲೀಸರು ಯಾರನ್ನೂ ಬಂಧಿಸಿಲ್ಲ ಮತ್ತು ನಾವು ಯಾವುದೇ ಹುಡುಗಿಯನ್ನು ತಪ್ಪಾಗಿ ನಡೆಸಿಕೊಂಡಿಲ್ಲ. ಪರಿಸ್ಥಿತಿಯನ್ನು ಶಾಂತಗೊಳಿಸಲು, ನಾವು ನಾಲ್ಕು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆತಂದು ನಂತರ ಅವರನ್ನು ಬಿಟ್ಟು ಕಳುಹಿಸಿದ್ದೇವೆ. ಆದಾಗ್ಯೂ, ವಿದ್ಯಾರ್ಥಿನಿಯರು ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಅಧಿಕಾರಿಗಳು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ನಮ್ಮ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವರೊಂದಿಗೆ ಮಾತನಾಡುವವರೆಗೂ ಸ್ವಲ್ಪ ಸಮಯ ಅಲ್ಲಿಯೇ ಇದ್ದರು ಎಂದು ಮನೋಜ್ ಕುಮಾರ್ ಅವರು ಎನ್‌ಡಿಟಿವಿಗೆ ತಿಳಿಸಿದರು.
ಆರೋಪ ನಿರಾಕರಿಸಿದ ಟೀನಾ ಡಾಬಿ
ನಾವು ಯಾರನ್ನೂ ಬಂಧಿಸಿಲ್ಲ. ಶುಲ್ಕ ಹೆಚ್ಚಳದ ಸಮಸ್ಯೆಯನ್ನು ಪರಿಹರಿಸಲಾಗಿದ್ದರೂ, ಕೆಲವು ವಿದ್ಯಾರ್ಥಿಗಳು ರಸ್ತೆ ತಡೆದು ತೊಂದರೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರು. ನನ್ನ ಅಧೀನ ಅಧಿಕಾರಿಗಳು ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ಶಾಂತಗೊಳಿಸಲು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಇದಾದ ಎರಡು ಗಂಟೆಗಳ ನಂತರ ಅವರು ಪೊಲೀಸ್ ಠಾಣೆಯಿಂದ ಹೋದರು ಮತ್ತು ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಿತು ಎಂದು ಟೀನಾ ಡಾಬಿ ಎನ್‌ಡಿಟಿವಿಗೆ ತಿಳಿಸಿದ್ದಾರೆ, (ಏಜೆನ್ಸೀಸ್).