300 ರೂ. ಲಂಚ ಕೊಟ್ಟು ಮೊಬೈಲ್​ನಲ್ಲಿ ಗೂಗಲ್​ನಲ್ಲಿ ಸರ್ಚ್​ ಮಾಡ್ಕೊಂಡು ನಾಗರಿಕ ಸೇವಾ ಪರೀಕ್ಷೆ ಬರೆದ ವಿದ್ಯಾರ್ಥಿಗಳು! Civil Service Exam  
ದೇಶ

300 ರೂ. ಲಂಚ ಕೊಟ್ಟು ಮೊಬೈಲ್​ನಲ್ಲಿ ಗೂಗಲ್​ನಲ್ಲಿ ಸರ್ಚ್​ ಮಾಡ್ಕೊಂಡು ನಾಗರಿಕ ಸೇವಾ ಪರೀಕ್ಷೆ ಬರೆದ ವಿದ್ಯಾರ್ಥಿಗಳು! Civil Service Exam

ಪ್ರಮುಖ ಮುಖ್ಯಾಂಶಗಳು

  • ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಗೂಗಲ್ ಸರ್ಚ್ ಮೂಲಕ ಉತ್ತರ ಹುಡುಕಿದ ಆಘಾತಕಾರಿ ಘಟನೆ
  • ಪ್ರತಿ ವಿದ್ಯಾರ್ಥಿಯಿಂದ 300 ರೂ. ಪಡೆದು ಮೊಬೈಲ್ ಬಳಕೆಗೆ ಅವಕಾಶ ನೀಡಿದ ಕಾಲೇಜು ಅಧಿಕಾರಿಗಳ ಬಂಧನ
  • ಲಂಚ ನೀಡಲು ಒಪ್ಪದ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡಿ ಹಗರಣ ಬಯಲಿಗೆಳೆದಿದ್ದಾರೆ
  • ಪರೀಕ್ಷಾ ಪಾವಿತ್ರ್ಯತೆ ಹಾಳುಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
Civil Service Exam : ಮಹಾರಾಷ್ಟ್ರದ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಚಂದ್ರಾಪುರದ ಸರ್ವೋದಯ ಕಾಲೇಜಿನಲ್ಲಿ ನಾಗರಿಕ ಸೇವಾ ಪರೀಕ್ಷೆಯ ಮೌಲ್ಯವೇ ಹರಾಜಾಗಿದ್ದು, ವಿದ್ಯಾರ್ಥಿಗಳು ಮೊಬೈಲ್ ಹಿಡಿದು ರಾಜಾರೋಷವಾಗಿ ಗೂಗಲ್ ಸರ್ಚ್ ಮಾಡುತ್ತಾ ಪರೀಕ್ಷೆ ಬರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕೇವಲ 300 ರೂಪಾಯಿ ಲಂಚಕ್ಕಾಗಿ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಿಟ್ಟು ವಂಚನೆಗೆ ಸಾಥ್ ನೀಡಿದ ಆರೋಪದ ಮೇಲೆ ಸರ್ವೋದಯ ಕಾಲೇಜು ಅಧಿಕಾರಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ‘ಡಿಜಿಟಲ್ ನಕಲು’ ವಿಡಿಯೋ ಈಗ ಶಿಕ್ಷಣ ವ್ಯವಸ್ಥೆಯ ಮಾನವನ್ನೇ ಹರಾಜು ಹಾಕಿದೆ.
ಸರ್ಕಾರವು ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಅಭಿಯಾನಗಳನ್ನು ನಡೆಸುತ್ತಿದ್ದರೂ ಸಹ, ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ವಂಚನೆ ಹಗಲು ಹೊತ್ತಿನಲ್ಲೇ ನಡೆದಿದೆ. ಪ್ರಾಮಾಣಿಕವಾಗಿ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಪರೀಕ್ಷೆ ಬರೆಯಲು ಬಯಸಿದ್ದ ಮತ್ತು ಲಂಚ ನೀಡಲು ನಿರಾಕರಿಸಿದ ವಿದ್ಯಾರ್ಥಿಗಳು, ಈ ಅನ್ಯಾಯವನ್ನು ಸಹಿಸದೆ ಪರೀಕ್ಷಾ ಕೇಂದ್ರದ ಅಕ್ರಮಗಳನ್ನು ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಕಾಲೇಜು ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಇಡೀ ಲೋಕಕ್ಕೆ ಬಯಲು ಮಾಡಿದ್ದಾರೆ.
ಸುಮಾರು 400 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದ ಈ ಕೇಂದ್ರದಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ವರದಿಯಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಒಂದೇ ಬೆಂಚ್‌ನಲ್ಲಿ ಮೂರ್ನಾಲ್ಕು ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆದಿದ್ದಾರೆ. ಇನ್ನು ಅನೇಕ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್‌ಗಳೇ ಇಲ್ಲದ ಕಾರಣ, ಅವರು ನೆಲದ ಮೇಲೆಯೇ ಕುಳಿತು ಪರೀಕ್ಷೆ ಬರೆಯಬೇಕಾದ ದುಸ್ಥಿತಿ ಎದುರಾಗಿತ್ತು.
ಕೇವಲ ಆಸನ ವ್ಯವಸ್ಥೆಯಷ್ಟೇ ಅಲ್ಲದೆ, ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೌಚಾಲಯದ ಸೌಲಭ್ಯವೂ ಇರಲಿಲ್ಲ ಎನ್ನಲಾಗಿದೆ. ಇಂತಹ ಅವ್ಯವಸ್ಥೆ ಮತ್ತು ಅಕ್ರಮಗಳಿಗೆ ಕಾರಣರಾದ ಕಾಲೇಜು ಆಡಳಿತ ಮಂಡಳಿ ಹಾಗೂ ಪರೀಕ್ಷಾ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕೆಂದು ಈಗ ಸಾರ್ವಜನಿಕವಾಗಿ ತೀವ್ರ ಒತ್ತಾಯ ಕೇಳಿಬರುತ್ತಿದೆ, (ಏಜೆನ್ಸೀಸ್​).