ಕೇವಲ 50 ರೂ. ಆಸೆಗೆ ಪೆನ್ ನುಂಗಿದ ವಿದ್ಯಾರ್ಥಿ
- ಮೋಜಿಗಾಗಿ ಅಥವಾ ಹಣಕ್ಕಾಗಿ ಸ್ನೇಹಿತರ ಮುಂದೆ ಚಾಲೆಂಜ್ ಮಾಡಿ ಪ್ರಾಣ ಕಳೆದುಕೊಂಡವರಿದ್ದಾರೆ
- ವಿದ್ಯಾರ್ಥಿಯೊಬ್ಬ 50 ರೂ. ಆಸೆಗೆ ಅಪಾಯಕಾರಿ ಚಾಲೆಂಜ್ ಮಾಡಿ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾನೆ
- ಮೂರು ವರ್ಷಗಳ ಹಿಂದೆ ನಡೆದ ಭಯಾನಕ ಘಟನೆ ಇದೀಗ ಬೆಳಕಿಗೆ ಬಂದಿದೆ
ಹೈದರಾಬಾದ್: ಮೋಜಿಗಾಗಿ ಅಥವಾ ಹಣಕ್ಕಾಗಿ ಸ್ನೇಹಿತರ ಮುಂದೆ ಚಾಲೆಂಜ್ ಮಾಡಿ, ತಮ್ಮ ಪ್ರಾಣವನ್ನೇ ಕಳೆದುಕೊಂಡ ಅನೇಕ ಘಟನೆಗಳನ್ನು ನಾವು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ವಿದ್ಯಾರ್ಥಿ ( Student ) ಕೇವಲ 50 ರೂಪಾಯಿ ಆಸೆಗೆ ಅಪಾಯಕಾರಿ ಚಾಲೆಂಜ್ ಮಾಡಿ, ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾನೆ. ಈ ಘಟನೆ ಮೂರು ವರ್ಷಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಘಟನೆಯ ವಿವರಕ್ಕೆ ಬರುವುದಾದರೆ, ಆಂಧ್ರ ಪ್ರದೇಶದ ಗುಂಟೂರಿನ ಕೊಥಪೇಟ್ ಮೂಲದ ಶ್ರೀನಿವಾಸ ರಾವ್ ಮತ್ತು ಲಕ್ಷ್ಮಿ ಸುಜಾತಲಾ ದಂಪತಿಗೆ ಮುರಳಿಕೃಷ್ಣ (16) ಹೆಸರಿನ ಪುತ್ರನಿದ್ದಾನೆ. ಪ್ರಸ್ತುತ ಆತ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಮೂರು ವರ್ಷಗಳ ಹಿಂದೆ, ಆತ ಒಂಬತ್ತನೇ ತರಗತಿಯಲ್ಲಿದ್ದಾಗ, ತನ್ನ ಸ್ನೇಹಿತರೊಂದಿಗೆ ಕೇವಲ 50 ರೂಪಾಯಿ ಆಸೆಗೆ ಬೆಟ್ಟಿಂಗ್ ಆಡಿ, ಪೆನ್ ನುಂಗಿದ್ದ.
ಪೆನ್ ನುಂಗಿದ ಬಳಿಕ ಕೆಲವು ವರ್ಷಗಳವರೆಗೆ ಆತನಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡಲಿಲ್ಲ. ಎಲ್ಲಿ ತನ್ನ ಹೆತ್ತವರಿಗೆ ಹೇಳಿದರೆ ನನ್ನನ್ನು ಬೈಯುತ್ತಾರೆ ಎಂಬ ಭಯದಿಂದ ಪೆನ್ ನುಂಗಿದ ವಿಚಾರವನ್ನು ಆತ ರಹಸ್ಯವಾಗಿ ಇಟ್ಟುಕೊಂಡಿದ್ದ.
ಕಳೆದ ಒಂದು ವರ್ಷದಿಂದ ಮುರಳಿಕೃಷ್ಣ ಆಗಾಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಮನೆಯವರಿಗೆ ಹೇಳಿದರೆ ಪೆನ್ ವಿಚಾರ ಗೊತ್ತಾಗಿಬಿಡುತ್ತದೆ ಅಂತ ಮೆಡಿಸಿನ್ ತೆಗೆದುಕೊಂಡು ತನ್ನ ನೋವನ್ನು ನಿಭಾಯಿಸಿಕೊಳ್ಳುತ್ತಿದ್ದ. ಹೀಗಿರುವಾಗ, ಡಿಸೆಂಬರ್ 18 ರಂದು, ನೋವು ಹೆಚ್ಚಾಯಿತು. ಎಷ್ಟರಮಟ್ಟಿಗೆ ಅಂದರೆ, ಸಹಿಸಲಾರದಷ್ಟು ನೋವು ಕಾಡಿತು.
ನೋವನ್ನು ತಾಳಲಾರದೇ ಮುರಳಿಕೃಷ್ಣ 3 ವರ್ಷದ ಹಿಂದೆ ನಡೆದಿದ್ದೆಲ್ಲವನ್ನು ಪಾಲಕರ ಮುಂದೆ ಹೇಳಿಕೊಂಡನು. ಮಗ ಹೇಳಿದ್ದನ್ನು ಕೇಳಿ ಪಾಲಕರಿಗೆ ಒಂದು ಕ್ಷಣ ಶಾಕ್ ಆಯಿತು. ತಕ್ಷಣ ಆತನನ್ನು ಗುಂಟೂರಿನ ಜಿಜಿಹೆಚ್‌ಗೆ ಕರೆದೊಯ್ದರು. ಅಲ್ಲಿ, ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಪೆನ್ನು ದೊಡ್ಡ ಕರುಳಿನಲ್ಲಿ ಸಿಲುಕಿಕೊಂಡಿರುವುದು ಗೊತ್ತಾಯಿತು.
ಸಾಮಾನ್ಯವಾಗಿ, ಅಂತಹ ವಸ್ತುಗಳು ದೇಹವನ್ನು ಪ್ರವೇಶಿಸಿದಾಗ, ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಆದಾಗ್ಯೂ, ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಯ (ಜಿಜಿಹೆಚ್) ಗ್ಯಾಸ್ಟ್ರೋಎಂಟರಾಲಜಿ ವೈದ್ಯಕೀಯ ತಂಡವು ಈ ಸವಾಲನ್ನು ಸ್ವೀಕರಿಸಿತು. ಯಾವುದೇ ಸಂಕೀರ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ, ಅತ್ಯಾಧುನಿಕ ಎಂಡೋಸ್ಕೋಪಿ ವಿಧಾನದ ಮೂಲಕ ವಿದ್ಯಾರ್ಥಿಯ ದೊಡ್ಡ ಕರುಳಿನಲ್ಲಿ ಸಿಲುಕಿಕೊಂಡಿದ್ದ ಪೆನ್ ಅನ್ನು ತೆಗೆದುಹಾಕಿದರು. ವೈದ್ಯರ ಸಮರ್ಪಣೆ ಮತ್ತು ಸಮಯಪಾಲನೆ ಯುವಕನ ಜೀವವನ್ನು ಉಳಿಸಿತು.
ಮೂರು ವರ್ಷಗಳಿಂದ ಹೊಟ್ಟೆಯಲ್ಲಿದ್ದ ಪೆನ್ ಹೊರಬಂದ ನಂತರ ವಿದ್ಯಾರ್ಥಿ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಈ ಕಷ್ಟಕರ ಚಿಕಿತ್ಸಾ ವಿಧಾನವನ್ನು ಬಹಳ ಪರಿಣಾಮಕಾರಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಜಿಜಿಎಚ್ ಸೂಪರಿಂಟೆಂಡೆಂಟ್ ವೈದ್ಯಕೀಯ ತಂಡವನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ತಮ್ಮ ಮಗನನ್ನು ರಕ್ಷಣೆ ಮಾಡಿದ್ದಕ್ಕೆ ಮುರಳಿಕೃಷ್ಣ ಅವರ ಪಾಲಕರು ಕಣ್ಣೀರು ಸುರಿಸುತ್ತಾ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜೂಜಾಟ ಮತ್ತು ಮೋಜಿಗಾಗಿ ಮಾಡುವ ಸಾಹಸಗಳು ಕೆಲವೊಮ್ಮೆ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ ಮತ್ತು ಯುವಕರು ಅಂತಹ ವಿಷಯಗಳಲ್ಲಿ ಜಾಗರೂಕರಾಗಿರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ, (ಏಜೆನ್ಸೀಸ್).