ಮದುವೆ ಮಂಟಪದಲ್ಲಿ ಡೌಟ್ ಕೇಳುತ್ತಿರುವ ವಿದ್ಯಾರ್ಥಿ
- ಟೀಚರ್ ಮದುವೆಗೆ ಬಂದ ವಿದ್ಯಾರ್ಥಿ
- ಅಕ್ಷತೆ ಹಾಕುವ ಬದಲು ಡೌಟ್ ಕೇಳಿದ ಸ್ಟೂಡೆಂಟ್
- ವೈರಲ್ ವಿಡಿಯೋಗೆ ನೆಟ್ಟಿಗರ ಕಿಲಾಡಿ ಕಮೆಂಟ್ಸ್
ನವದೆಹಲಿ: ಶಿಕ್ಷಕರು ಪಾಠ ಮಾಡುವಾಗ, ಏನಾದರೂ ಪ್ರಶ್ನೆಗಳಿದ್ದರೆ ಕೇಳಿ, ಸುಮ್ಮನೆ ಎಲ್ಲದಕ್ಕೂ ಹು.ಹು.. ಎನ್ನಬೇಡಿ ಎನ್ನುವ ಡೈಲಾಗ್ನ್ನು ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ಕೇಳಿರುತ್ತಾರೆ.
ಆದರೆ ಈ ಮಾತನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ ಹುಡುಗನೊಬ್ಬ ತನ್ನ ಶಿಕ್ಷಕಿಯೊಬ್ಬರ ಮದುವೆಗೆ ತೆರಳಿ ತನ್ನಲ್ಲಿ ಮೂಡಿದ್ದ ಪ್ರಶ್ನೆಗೆ ಉತ್ತರ ಪಡೆಯುತ್ತಿರುವ ವಿಡಿಯೋ ಈದೀಗ ಸಾಮಾಜಿಕ ಮಾಧ್ಯಮದಾದ್ಯಂತ ವೈರಲ್ (Viral Video) ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವಧುವಿನ ರೂಪದಲ್ಲಿ ಕಂಗೊಳಿಸುತ್ತಿದ್ದ ಶಿಕ್ಷಕಿ ಮದುವೆ ವೇದಿಕೆಯ ಮೇಲೆ ನಿಂತಿದ್ದಾರೆ. ಹಿತೈಷಿಗಳು ಶುಭ ಹಾರೈಸಲು ಬರುತ್ತಿರುವಾಗ, ಅವರ ವಿದ್ಯಾರ್ಥಿಯೊಬ್ಬ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾನೆ. ಸಮಾಧಾನವಾಗಿ ಟೀಚರ್ ಬಳಿ ಬಂದ ಆತ, ಮೇಡಂ, ನನಗೊಂದು ಅನುಮಾನ ಇದೆ ಎಂದು ಗಂಭೀರವಾಗಿ ಹೇಳಿದ್ದಾನೆ.
ಸಾಮಾನ್ಯವಾಗಿ ಅಂತಹ ಸಂದರ್ಭದಲ್ಲಿ ಯಾರಾದರೂ ಗಾಬರಿಯಾಗಬಹುದು. ಆದರೆ, ಆ ಶಿಕ್ಷಕಿ ಮಾತ್ರ ಎಳ್ಳಷ್ಟೂ ಮೌನವಾಗದೆ, ನಗುತ್ತಲೇ ನಿನಗೆ ನಿನ್ನೆಯೇ ಬರಲು ಹೇಳಿದ್ದೆ ಅಲ್ವಾ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಶಿಕ್ಷಕಿ ಮತ್ತು ವಿದ್ಯಾರ್ಥಿಯ ಈ ಸಂಭಾಷಣೆ ಕೇಳಿ ಮಂಟಪದಲ್ಲಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ.
ನೆಟ್ಟಿಗರ ಕಿಲಾಡಿ ಕಾಮೆಂಟ್‌ಗಳು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಹಬ್ಬ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಪಾಪ ಆ ಟೀಚರ್, ಮದುವೆ ಮೂಹೂರ್ತದಲ್ಲಿ ಇದಕ್ಕೆ ಏನು ಉತ್ತರ ಕೊಡಲಿ ಎಂದು ಯೋಚಿಸಿರಬೇಕು ಎಂದಿದ್ದಾರೆ. ಮತ್ತೊಬ್ಬರು ಹುಡುಗನಿಗೆ ತನ್ನ ಟೀಚರ್ ಮದುವೆಯಾಗುತ್ತಿರುವ ಗಂಡು ಯಾರು ಎಂಬ ಬಗ್ಗೆ ಡೌಟ್ ಇರಬೇಕು! ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ದೇವರೇ, ಮದುವೆ ಮಂಟಪದಲ್ಲೂ ಬಿಡದ ಇಂತಹ ಕಿರಾತಕ ವಿದ್ಯಾರ್ಥಿಗಳಿಂದ ಪ್ರತಿಯೊಬ್ಬ ಶಿಕ್ಷಕರನ್ನು ನೀನೇ ಕಾಪಾಡು ಎಂದು ಹೇಳಿದ್ದಾರೆ,(ಏಜನ್ಸೀಸ್).