Thalapathy Vijay  
ದೇಶ

Thalapathy ಸಂಸಾರದಲ್ಲಿ ಬಿರುಗಾಳಿ! ವಿಜಯ್​​ ಅಭಿಮಾನಿಯಾಗಿದ್ದ ಸಂಗೀತಾ ಅರ್ಧಾಂಗಿ ಆಗಿದ್ದೇಗೆ?

ಪ್ರಮುಖ ಮುಖ್ಯಾಂಶಗಳು

  • ಸಂಗೀತಾ-ವಿಜಯ್ ಲವ್ ಸ್ಟೋರಿ ಅಂತ್ಯವಾಗುತ್ತಾ? ಸುಖಿ ಸಂಸಾರದಲ್ಲಿ ಶುರುವಾಯ್ತು ಬಿರುಕು!
  • ದಶಕಗಳ ದಾಂಪತ್ಯಕ್ಕೆ ಅಂತ್ಯಹಾಡ್ತಾರಾ ವಿಜಯ್-ಸಂಗೀತಾ? ಇಲ್ಲಿದೆ ನೋಡಿ ಸಂಚಲನ ಮೂಡಿಸಿದ ವಿವರ!
  • ದಳಪತಿ ವಿಜಯ್ ಡಿವೋರ್ಸ್ ಸಂಚಲನ: ಯಾರು ಈ ಸಂಗೀತಾ?
ಚೆನ್ನೈ: ದಶಕಗಳ ಕಾಲ ತಮಿಳು ಚಿತ್ರರಂಗದ ಮಾದರಿ ದಂಪತಿಗಳೆಂದು ಹೆಸರುವಾಸಿಯಾಗಿದ್ದ ನಟ ಹಾಗೂ ರಾಜಕಾರಣಿ ದಳಪತಿ(Thalapathy) ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ಅವರ ದಾಂಪತ್ಯ ಈಗ ಬೀದಿಗೆ ಬಂದಿದೆಯೇ? ಹೀಗೊಂದು ಅನುಮಾನ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.
ಹೌದು, ವಿಜಯ್ ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ.
ಸಂಗೀತಾ ಸ್ವರ್ಣಲಿಂಗಂ ಶ್ರೀಲಂಕಾ ಮೂಲದ ತಮಿಳು ಉದ್ಯಮಿಯ ಪುತ್ರಿ. ಲಂಡನ್‌ನಲ್ಲಿ ನೆಲೆಸಿದ್ದ ಅವರು ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. 1996ರಲ್ಲಿ 'ಪೂವೇ ಉನಕ್ಕಾಗಿ' ಚಿತ್ರದ ಯಶಸ್ಸಿನ ನಂತರ ವಿಜಯ್ ಅವರನ್ನು ಭೇಟಿಯಾಗಲು ಲಂಡನ್‌ನಿಂದ ಚೆನ್ನೈಗೆ ಬಂದಿದ್ದರು. ವಿಜಯ್ ಅವರ ಸರಳತೆಗೆ ಮನಸೋತ ಸಂಗೀತಾ, ನಂತರ ಅವರ ಕುಟುಂಬಕ್ಕೂ ಹತ್ತಿರವಾದರು. ವಿಜಯ್ ಪೋಷಕರಾದ ಎಸ್.ಎ. ಚಂದ್ರಶೇಖರ್ ಮತ್ತು ಶೋಭಾ ಅವರ ಒಪ್ಪಿಗೆಯ ಮೇರೆಗೆ 1999 ಆಗಸ್ಟ್ 25 ರಂದು ಈ ಜೋಡಿ ವಿವಾಹವಾಗಿತ್ತು. ಕ್ರೈಸ್ತ ಧರ್ಮದ ವಿಜಯ್ ಮತ್ತು ಹಿಂದೂ ಧರ್ಮದ ಸಂಗೀತಾ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು.

ವಿಚ್ಛೇದನ ಅರ್ಜಿಯಲ್ಲಿನ ಆಘಾತಕಾರಿ ಅಂಶಗಳೇನು?

ವರದಿಗಳ ಪ್ರಕಾರ, ಸಂಗೀತಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ವಿಜಯ್ ಅವರು ಖ್ಯಾತ ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದು ಸಂಗೀತಾ ಅವರ ಪ್ರಮುಖ ಆರೋಪ ಎಂದು ಮೂಲಗಳು ತಿಳಿಸಿವೆ.
ವರ್ಷಗಳ ಕಾಲ ಕ್ಯಾಮೆರಾ ಕಣ್ಣಿನಿಂದ ದೂರವಿದ್ದ ಸಂಗೀತಾ, ಇತ್ತೀಚಿನ ದಿನಗಳಲ್ಲಿ ವಿಜಯ್ ಅವರ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಮಕ್ಕಳು ಮತ್ತು ಕುಟುಂಬದ ಸ್ಥಿತಿ

ಈ ದಂಪತಿಗೆ 2000ರಲ್ಲಿ ಪುತ್ರ ಸಂಜಯ್ ಮತ್ತು 2005ರಲ್ಲಿ ಪುತ್ರಿ ದಿವ್ಯಾ ಜನಿಸಿದರು. ಈ ಇಬ್ಬರೂ ಮಕ್ಕಳು ವಿಜಯ್ ಅವರ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇಷ್ಟು ವರ್ಷಗಳ ಕಾಲ ಸುಖಿ ಸಂಸಾರ ನಡೆಸುತ್ತಿದ್ದ ಈ ಜೋಡಿ ಈಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ಶಾಕಿಂಗ್​ ವಿಷಯವಾಗಿದೆ.

ಅಧಿಕೃತ ಹೇಳಿಕೆ ಬಾಕಿ

ಈವರೆಗೂ ನಟ ವಿಜಯ್ ಆಗಲಿ ಅಥವಾ ಸಂಗೀತಾ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ವಿಜಯ್ ಅವರು ತಮ್ಮ ಸಿನಿಮಾ ಬದುಕಿನ ಕೊನೆಯ ಘಟ್ಟದಲ್ಲಿದ್ದು, ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸಿರುವ ಈ ಸಂದರ್ಭದಲ್ಲಿ ಈ ಬೆಳವಣಿಗೆ ಅವರ ರಾಜಕೀಯ ಭವಿಷ್ಯದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ,(ಏಜೆನ್ಸೀಸ್​).