ಸಿಗ್ನಲ್ ಮಧ್ಯೆಯೇ ಕಾರು ನಿಲ್ಲಿಸಿ, ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿ 
ದೇಶ

ಟ್ರಾಫಿಕ್‌ನಲ್ಲಿ ಕಾರು ನಿಲ್ಲಿಸಿ ರಸ್ತೆಯಲ್ಲೇ ಮೂತ್ರ ವಿಸರ್ಜನೆ! ವೈರಲ್ ವಿಡಿಯೋ ನೋಡಿ ನೆಟ್ಟಿಗರಿಂದ ತರಾಟೆ | Urinating on road

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಸಾಮಾಜಿಕ ಪ್ರಜ್ಞೆ ಕುಂಠಿತಕ್ಕೆ ನೂತನ ನಿದರ್ಶನ
  • ಸಿಗ್ನಲ್ ಮಧ್ಯೆಯೇ ಕಾರು ನಿಲ್ಲಿಸಿ, ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ
  • ವೈರಲ್​ ವಿಡಿಯೋಗೆ ನಟ್ಟಿಗರಿಂದ ತರಾಟೆ
  • ಪೊಲೀಸರಿಂದ ಮುಂದುವರೆದ ಕಾರ್ಯಾಚರಣೆ
ಫರಿದಾಬಾದ್/ಗುರುಗ್ರಾಮ್: ರಸ್ತೆಯಲ್ಲಿ ಸಂಚರಿಸುವಾಗ ನಾಗರಿಕ ಪ್ರಜ್ಞೆ ಇರಬೇಕು ಎಂಬುದು ಕನಿಷ್ಠ ಜ್ಞಾನ. ಆದರೆ, ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ಓಡಾಡುವ ವ್ಯಕ್ತಿಯೊಬ್ಬ ಟ್ರಾಫಿಕ್ ಸಿಗ್ನಲ್ ಮಧ್ಯೆಯೇ ಕಾರು ನಿಲ್ಲಿಸಿ, ರಸ್ತೆಯಲ್ಲೇ ಮೂತ್ರ ವಿಸರ್ಜನೆ (Urinating on road) ಮಾಡಿರುವ ಅಸಹ್ಯಕರ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.

ನಡೆದಿದ್ದೇನು?

ದೆಹಲಿಯಿಂದ ಫರಿದಾಬಾದ್‌ಗೆ ಸಂಪರ್ಕಿಸುವ ಹಳೆಯ ಫರಿದಾಬಾದ್ ಬಳಿ ಈ ಘಟನೆ ನಡೆದಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಬಂದ ವ್ಯಕ್ತಿಯೊಬ್ಬ, ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದಾಗ ಕಾರಿನಿಂದ ಕೆಳಗಿಳಿದಿದ್ದಾನೆ. ಸುತ್ತಲೂ ನೂರಾರು ವಾಹನಗಳು ಸಂಚರಿಸುತ್ತಿದ್ದರೂ, ಪಾದಚಾರಿಗಳು ಹಾಗೂ ಮಹಿಳೆಯರು ಓಡಾಡುತ್ತಿದ್ದರೂ ಕಿಂಚಿತ್ತೂ ನಾಚಿಕೆ ಇಲ್ಲದೆ ರಸ್ತೆಯ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಅವನ ಈ ಕೃತ್ಯ ಮುಗಿಯುವವರೆಗೂ ರಸ್ತೆಯಲ್ಲಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಮೂತ್ರ ವಿಸರ್ಜನೆ ಮುಗಿದ ನಂತರ ಆ ಭೂಪ ಏನೂ ತಿಳಿಯದವನಂತೆ ಮತ್ತೆ ಕಾರು ಹತ್ತಿ ಹೊರಟು ಹೋಗಿದ್ದಾನೆ. ಈ ಇಡೀ ದೃಶ್ಯವನ್ನು ಹಿಂದಿದ್ದ ವಾಹನದವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸರ ಗಮನಕ್ಕೆ ಬಂದ ವಿಡಿಯೋ

ಈ ವಿಡಿಯೋ ಎಕ್ಸ್ (ಟ್ವಿಟರ್​) ನಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ದೆಹಲಿ ಮತ್ತು ಗುರುಗ್ರಾಮ್ ಪೊಲೀಸರನ್ನು ಟ್ಯಾಗ್ ಮಾಡಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾರಿನ ನಂಬರ್ ಪ್ಲೇಟ್ ಫರಿದಾಬಾದ್ ನೋಂದಣಿಯದ್ದಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫರಿದಾಬಾದ್ ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್, ವಾಹನದ ವಿವರಗಳ ಆಧಾರದ ಮೇಲೆ ವ್ಯಕ್ತಿಯನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಆತನನ್ನು ಠಾಣೆಗೆ ಕರೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ನೆಟ್ಟಿಗರ ನಡುವೆ ವಾಕ್ಸಮರ!

ಈ ವಿಡಿಯೋ ಕಂಡು ಜನರು ಎರಡು ಗುಂಪುಗಳಾಗಿ ಚರ್ಚಿಸುತ್ತಿದ್ದಾರೆ. ಬಹುತೇಕರು ಇದು ರಾಷ್ಟ್ರೀಯ ಅವಮಾನ, ಇಂತಹವರಿಗೆ ಭಾರೀ ದಂಡ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಲಕ್ಷಾಂತರ ರೂಪಾಯಿ ಕಾರನ್ನು ಖರೀದಿಸಿದ್ದರೆನಂತೆ ಸಂಸ್ಕಾರವನ್ನು ಕೊಂಡು ಕೊಳ್ಳಲು ಆಗಲ್ಲ ಎಂದು ಕಮೆಂಟ್​ನಲ್ಲಿ ಜರಿದಿದ್ದಾರೆ.
ಇನ್ನೊಂದೆಡೆ, ಕೆಲವರು ಈತನ ಪರವಾಗಿಯೂ ಮಾತನಾಡಿದ್ದು, ಭಾರತದ ರಸ್ತೆಗಳಲ್ಲಿ ಶೌಚಾಲಯಗಳ ಕೊರತೆಯಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದಾಗ ಅನಿವಾರ್ಯವಾಗಿ ಹೀಗೆ ಮಾಡಿರಬಹುದು. ಎಂದು ಕೆಲವರು ಹೇಳಿದರೆ,ಬಹುಶಃ ಈ ವ್ಯಕ್ತಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ,(ಏಜನ್ಸೀಸ್​).