ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಹುಲ್ ಗಾಂಧಿ 
ದೇಶ

ಪ್ರತಿ ವಿಷಯ ರಾಜಕೀಯಗೊಳಿಸುವುದನ್ನು ನಿಲ್ಲಿಸಿ: ಟಾಟಾ ಸಂಸ್ಥೆಯ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ | Nirmala Sitharaman

ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರು ನೇಮಕದ ಬಗ್ಗೆ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ನಡುವೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಟಾಟಾ ಸಂಸ್ಥೆಯನ್ನು ಕ್ರಿಮಿನಲ್ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ.

ನವದೆಹಲಿ: ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರು ನೇಮಕದ ಬಗ್ಗೆ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ನಡುವೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಟಾಟಾ ಸಂಸ್ಥೆಯನ್ನು ಕ್ರಿಮಿನಲ್ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ರಾಹುಲ್ ಗಾಂಧಿಯವರ ಪೋಸ್ಟ್​ ಅನ್ನು ರಿಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಅವರು, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರೇ ಪ್ರತಿಯೊಂದು ವಿಷಯವನ್ನೂ ರಾಜಕೀಯಗೊಳಿಸುವುದನ್ನು ನಿಲ್ಲಿಸಿ. ಅಲ್ಲದೆ, ವಾಣಿಜ್ಯ ಮತ್ತು ಕಾನೂನು ಸಂಬಂಧಿತ ವಿಷಯಗಳನ್ನು ಸುಮ್ಮನೆ ಕ್ರಿಮಿನಲ್ ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ.

ಭಾರತೀಯ ಉದ್ಯಮಗಳನ್ನು ಮತ್ತು ನಮ್ಮ ಉದ್ಯಮಿಗಳ ಯಶಸ್ಸನ್ನು ಪದೇ ಪದೇ ಟೀಕಿಸಿರುವ ನೀವು, ಈಗ ಅವಿಶ್ವಾಸ ಮತ್ತು ವಿಷತ್ವವನ್ನು ಹರಡಲು ನಮ್ಮ ಉದ್ಯಮಿಗಳನ್ನು ನಿಮ್ಮೊಂದಿಗೆ ಸೇರುವಂತೆ ಪ್ರಚೋದಿಸಲು ಪ್ರಯತ್ನಿಸುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ದಶಕಗಳ ಕಾಲ, ನಿಮ್ಮ ಪಕ್ಷವು 'ಲೈಸೆನ್ಸ್-ಕೋಟಾ ರಾಜ್' ಎಂಬ ಉಸಿರುಗಟ್ಟಿಸುವ ವ್ಯವಸ್ಥೆಯ ಮೂಲಕ ಭಾರತೀಯ ಉದ್ಯಮಿಗಳ ಉತ್ಸಾಹವನ್ನು ಹತ್ತಿಕ್ಕಿತು. ಮತ್ತು ಕೋಟ್ಯಂತರ ಭಾರತೀಯರನ್ನು ಬಡತನಕ್ಕೆ ತಳ್ಳಿತು. ಇದಕ್ಕೆ ವ್ಯತಿರಿಕ್ತವಾಗಿ, ನರೇಂದ್ರ ಮೋದಿ ಸರ್ಕಾರವು ಭಾರತೀಯ ಉದ್ಯಮವನ್ನು ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಮೂಲವಾಗಿ ನೋಡಿದೆ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು, ನಾಯಕರು, ಸರ್ಕಾರಗಳು ಮತ್ತು ಸಂಸ್ಥೆಗಳು ಕೈಗಾರಿಕೆಗಳನ್ನು ಬೆಂಬಲಿಸುವುದು, ರೈತರನ್ನು ಬಲಪಡಿಸುವುದು ಮತ್ತು ಯುವಜನರ ಭವಿಷ್ಯವನ್ನು ಭದ್ರಪಡಿಸುವುದು ಸಮಾನ ಜವಾಬ್ದಾರಿಯಾಗಿದೆ. ನಿಮ್ಮ ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ರಚನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ನ್ಯಾಯಾಂಗವನ್ನು ಉಲ್ಲೇಖಿಸಿ, ಸಂವಿಧಾನವು ನಾಗರಿಕರಿಗೆ ನ್ಯಾಯವನ್ನು ಖಾತರಿಪಡಿಸುತ್ತದೆ. ಮತ್ತು ಅದನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ನ್ಯಾಯಾಲಯಗಳಿಗೆ ವಹಿಸಲಾಗಿದೆ. . ನೀವು, ನಿಮ್ಮ ಪಕ್ಷ ಮತ್ತು ನಿಮ್ಮ ಪಕ್ಷಕ್ಕೆ ಸೇರಿದ ಪ್ರಧಾನ ಮಂತ್ರಿಗಳು ನ್ಯಾಯಾಂಗವನ್ನು ಎಷ್ಟು ಕಳಪೆ ರೀತಿಯಲ್ಲಿ ಅವಮಾನಿಸಿದ್ದೀರಿ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಆದ್ದರಿಂದ ಎಲ್ಲಾ ಕಡೆ ಭೂತಗಳನ್ನು ಕಾಣುವುದನ್ನು ನಿಲ್ಲಿಸಿ ಎಂದಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಹಾಕಿರುವ ರಾಹುಲ್ ಗಾಂಧಿಯವರು, ಟಾಟಾ ಸಂಸ್ಥೆಯನ್ನು ಕ್ರಿಮಿನಲ್ ರೀತಿಯಲ್ಲಿ ಸಂಪೂರ್ಣವಾಗಿ ನಾಶಮಾಡಲಾಗುತ್ತಿದೆ. ಆದರೆ ಯಾವುದೇ ಉದ್ಯಮ ನಾಯಕರು ಇದರ ವಿರುದ್ಧ ಒಂದೂ ಮಾತು ಆಡಲು ಧೈರ್ಯ ಮಾಡುತ್ತಿಲ್ಲ ಎಂದಿದ್ದಾರೆ.

ನೀವು ಇನ್ನೆಷ್ಟು ಕಾಲ ಮೌನವಾಗಿರುತ್ತೀರಿ? ಅವರು ನಿಮ್ಮನ್ನೇ ತಮ್ಮ ವಶಕ್ಕೆ ತೆಗೆದುಕೊಳ್ಳುವವರೆಗೂ ಕಾಯುತ್ತೀರಾ? ಭಾರತೀಯ ಉದ್ಯಮ ಕ್ಷೇತ್ರವು ಮೋದಿ ಮತ್ತು ಶಾ ಅವರ ಆಟದ ವಸ್ತುವಲ್ಲ. ನಿಮ್ಮಲ್ಲಿ ಧೈರ್ಯವಿಲ್ಲ, ಆದರೆ ನಮ್ಮಲ್ಲಿ ಧೈರ್ಯವಿದೆ. ಈ ಅಪರಾಧಗಳಿಗೆ ನ್ಯಾಯ ಸಿಗುವಂತೆ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).