cyber 
ದೇಶ

ಸೈಬರ್​ ವಂಚನೆ ನಿಲ್ಲಲಿ

ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್​ ಬಂಧನದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್​ ತನಿಖೆಯ ಹೊಣೆಯನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಗೆ ವಹಿಸಿರುವುದು ಮಹತ್ವದ ಬೆಳವಣಿಗೆ.
ಸೈಬರ್​ ವಂಚಕರ ಬ್ಯಾಂಕ್​ ಖಾತೆಗಳನ್ನು ಕೃತಕ ಬುದ್ಧಿಮತ್ತೆ (ಎಐ) ನೆರವಿನಿಂದ ಫ್ರೀಜ್​ ಮಾಡಲು ಸಾಧ್ಯವಿದೆಯೇ ಎಂದು ರಿಸರ್ವ್​ ಬ್ಯಾಂಕ್​ಗೆ (ಆರ್​ಬಿಐ) ಕೋರ್ಟ್​ ಪ್ರಶ್ನಿಸಿದೆ. ಹೂಡಿಕೆ, ಅರೆಕಾಲಿಕ ಉದ್ಯೋಗದ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆಯೂ ಸುಪ್ರೀಂ ಕೋರ್ಟ್​ ಉಲ್ಲೇಖ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್​ ಬಂಧನ ದೊಡ್ಡ ತಲೆನೋವಾಗಿ ಕಾಡುತ್ತಿದ್ದು, ಬೆದರಿಕೆಯಾಗಿ ಪರಿಣಮಿಸಿದೆ.
ಡಿಜಿಟಲ್​ ಬಂಧನದಿಂದ ಭಾರತೀಯರು ಈವರೆಗೆ 3 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಕಳೆದುಕೊಂಡಿರುವುದು, ಈ ಕರಾಳ ಜಾಲದ ಭೀಕರತೆಗೆ ಸಾ. 2024ರಲ್ಲಿ ಈ ಸಂಬಂಧ 1.24 ಲಕ್ಷ ದೂರುಗಳು ದಾಖಲಾಗಿವೆ. 2025ರ ಮೊದಲ ಎರಡು ತಿಂಗಳಲ್ಲೇ ಡಿಜಿಟಲ್​ ಬಂಧನದ 17,718 ಟನೆಗಳು ವರದಿಯಾಗಿವೆ.
ಹೆಚ್ಚಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಲಾಗುತ್ತಿದೆ. 78%ರಿಂದ 82% ಸಂತ್ರಸ್ತರು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಹೊರದೇಶಗಳಿಂದಲೂ ಈ ಜಾಲಗಳು ಕಾರ್ಯನಿರ್ವಹಿಸುತ್ತಿದ್ದು, ತನಿಖೆಗೆ ಇಂಟರ್​ಪೋಲ್​ ನೆರವು ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ. ಕಾಂಬೋಡಿಯಾ, ಲಾವೋಸ್​ ಸೇರಿ ಹಲವು ದೇಶಗಳಿಂದ ಇಂಥ ಜಾಲಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ತನಿಖಾ ಸಂಸ್ಥೆಗಳು ಅಲ್ಲಿಯವರೆಗೆ ತಲುಪುವುದು ಮತ್ತು ಆ ದೇಶಗಳಲ್ಲಿ ತನಿಖೆಗೆ ಸಹಕಾರ ಪಡೆಯುವುದು ಸವಾಲಾಗಿ ಪರಿಣಮಿಸಿದೆ.
ಮೊದಲ ಆದ್ಯತೆಯಾಗಿ ಸಿಬಿಐ ಡಿಜಿಟಲ್​ ಬಂಧನದ ಪ್ರಕರಣಗಳನ್ನು ತನಿಖೆಗೆ ಕೈಗೆತ್ತಿಕೊಳ್ಳಲಿದೆ. ಬಳಿಕ, ಸೈಬರ್​ ಅಪರಾಧ ಮತ್ತು ಡಿಜಿಟಲ್​ ವಂಚನೆಯ ಇತರ ಪ್ರಕರಣಗಳ ಕಡೆಗೆ ಗಮನ ವಹಿಸಲಿದೆ. ಯಾವ ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿಲ್ಲವೋ ಅಂಥ ಕಡೆಗಳಲ್ಲಿ ಆಯಾ ರಾಜ್ಯ ಸರ್ಕಾರ ತನಿಖೆಗೆ ಅನುಮತಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಡಿಜಿಟಲ್​ ಬಂಧನದ ಪ್ರಕರಣಗಳಿಂದ ಜನರು ಹಣವಷ್ಟೇ ಕಳೆದುಕೊಂಡಿಲ್ಲ, ನೆಮ್ಮದಿಯನ್ನೂ ಕಳೆದುಕೊಂಡು ಖಿನ್ನತೆಯಿಂದ ಬಳಲುತ್ತಿದ್ದಾರೆ. ಡಿಜಟಿಲ್​ ಬಂಧನದ ಹೆಚ್ಚು ಪ್ರಕರಣಗಳು ಬಿಹಾರ ಮತ್ತು ಕರ್ನಾಟಕದಲ್ಲಿ ದಾಖಲಾಗಿವೆ. ಡಿಜಿಟಲ್​ ಯುಗದ ಈ ನವಪಿಡುಗಿನ ವಿರುದ್ಧ ಈಗ ಪರಿಣಾಮಕಾರಿ ಹೋರಾಟ ಅಗತ್ಯವಾಗಿದೆ. ಜನರು ಕೂಡ ವಂಚಕರ ಕರೆ ಬಂದಾಗ ಆತಂಕಗೊಳ್ಳದೆ, ಸಹಾಯವಾಣಿ (1930)ಯನ್ನು ಸಂಪರ್ಕಿಸಬೇಕು. ಹಿರಿಯ ನಾಗರಿಕರು ಹೆಚ್ಚು ಎಚ್ಚರಿಕೆ ವಹಿಸಬೇಕು. ಸಿಬಿಐನ ತನಿಖೆಯಿಂದ ದುರುಳ ವಂಚಕರು ಕಾನೂನಿನ ಕಟಕಟೆಗೆ ಬರುವಂತಾಗಲಿ.