ಸಿಎಂ ಯೋಗಿ ಆದಿತ್ಯನಾಥ್ 
ದೇಶ

ದ್ವಂದ್ವ ನಿಲುವು ಬಿಡಿ; ಗೋವು ನಮ್ಮ ತಾಯಿ: ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ: ಯೋಗಿ ಆದಿತ್ಯನಾಥ್ ತಿರುಗೇಟು | Yogi Adityanath

ಲಖನೌ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಕೆಲವು ಮುಸ್ಲಿಂ ಧರ್ಮಗುರುಗಳ ಬೇಡಿಕೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ತಿರುಗೇಟು ನೀಡಿದ್ದು, ದ್ವಂದ್ವ ನಿಲುವು ಬಿಡಿ, ಗೋವು ನಮ್ಮ ತಾಯಿ ಅದನ್ನು ಮತ್ತೆ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜ್ನೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಕೆಲವು ಮೌಲಾನರು ಒತ್ತಾಯಿಸಿರುವುದು ನನ್ನ ಗಮನಕ್ಕೆ ಬಂದಿದೆ. ಹಸು ಈಗಾಗಲೇ ನಮ್ಮ ತಾಯಿ. ಹಸುಗಳೊಂದಿಗಿನ ನಮ್ಮ ಬಾಂಧವ್ಯ ಇಂದಿನದ್ದಲ್ಲ. ಇದು ಕಾಲಾತೀತ ಬಂಧ. ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಮರು ವ್ಯಾಖ್ಯಾನಿಸುವ ಅಥವಾ ಔಪಚಾರಿಕ ಘೋಷಣೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಒಂದು ಕಡೆ ಪ್ರಾಣಿ ಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದೀರಿ, ಮತ್ತೊಂದೆಡೆ, ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ನೀವು ಒತ್ತಾಯಿಸುತ್ತಿದ್ದೀರಿ. ಇದು ನಿಮ್ಮ ದ್ವಂದ್ವ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮುಸ್ಲಿಂ ಧರ್ಮಗುರುಗಳ ವಿರುದ್ಧ ಕಿಡಿಕಾರಿದ್ದಾರೆ.
ಪ್ರಾಣಿ ಹತ್ಯೆಯಲ್ಲಿ ತೊಡಗಿರುವವರನ್ನು ತಮ್ಮ ಸರ್ಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತದೆ. ಮತ್ತು ಭವಿಷ್ಯದ ಪೀಳಿಗೆಗಳು ಸಹ ಪ್ರಾಣಿ ಹತ್ಯೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).