ಅಯೋಧ್ಯೆ ರಾಮ ಮಂದಿರದ ಕಾಣಿಕೆ ಪೆಟ್ಟಿಗೆ ಕಳ್ಳತನ ಆರೋಪ(Ayodhya Ram Mandir ಸಾಂದರ್ಭಿಕ ಚಿತ್ರ)
- ಅಯೋಧ್ಯೆ ರಾಮ ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಲಕ್ಷಾಂತರ ರೂಪಾಯಿ ಹಣ ಕಳ್ಳತನ ಆರೋಪ
- ಕದ್ದ ಹಣದಲ್ಲಿ ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಉಡುಗೊರೆ, ಸಹೋದರನ ಅದ್ದೂರಿ ಮದುವೆ
- ಹಣ ಕಳ್ಳತನ ಮಾಡಿದ ಆರೋಪದ ಮೇಲೆ ಒಟ್ಟು ಎಂಟು ಮಂದಿ ಎಣಿಕೆ ಸಿಬ್ಬಂದಿ ಬಂಧಿಸಿದ ಪೊಲೀಸರು
ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದ ಕಾಣಿಕೆ ಪೆಟ್ಟಿಗೆಯಿಂದ ಲಕ್ಷಾಂತರ ರೂಪಾಯಿ ಹಣ ಕಳ್ಳತನವಾಗಿರುವ (Ayodhya Ram Mandir) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ದೇವಸ್ಥಾನದ ಕಾಣಿಕೆ ಎಣಿಕೆ ಸಿಬ್ಬಂದಿಯೇ ಈ ವಂಚನೆ ಎಸಗಿದ್ದು, ಕದ್ದ ಹಣದಲ್ಲಿ ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಉಡುಗೊರೆ, ಸಹೋದರನ ಅದ್ದೂರಿ ಮದುವೆ ಹಾಗೂ ಕುಟುಂಬಸ್ಥರಿಗೆ ಐಷಾರಾಮಿ ಗಿಫ್ಟ್‌ಗಳನ್ನು ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಮಮಂದಿರದ ಕಾಣಿಕೆ ಹಣ ಕಳ್ಳತನ ಮಾಡಿದ ಆರೋಪದ ಮೇಲೆ ಒಟ್ಟು ಎಂಟು ಮಂದಿ ಎಣಿಕೆ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ಎಂಬಾತ ಪೊಲೀಸರ ವಿಚಾರಣೆ ವೇಳೆ ತಾನು ನಡೆಸಿದ ಐಷಾರಾಮಿ ಖರ್ಚುಗಳ ಬಗ್ಗೆ ಸಂಪೂರ್ಣ ಸತ್ಯ ಒಪ್ಪಿಕೊಂಡಿದ್ದಾನೆ.
ಆರೋಪಿ ಹೇಳಿದ್ದೇನು?
ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಅವಿನಾಶ್ ಶುಕ್ಲಾ ನೀಡಿರುವ ಮಾಹಿತಿ ಪ್ರಕಾರ, ಕದ್ದ ಮೊತ್ತ ಕೋಟಿಗಟ್ಟಲೆ ಎಂದು ಅಂದಾಜಿಸಲಾಗಿದ್ದರೂ, ತನ್ನ ಕುಟುಂಬ ಮತ್ತು ಸ್ನೇಹಿತರಿಗಾಗಿ ಸುಮಾರು 19 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದರಲ್ಲಿ ತನ್ನ ಸಹೋದರನ ಅದ್ದೂರಿ ವಿವಾಹಕ್ಕೆ 6 ಲಕ್ಷ ರೂ., ತನ್ನ ಇನ್ನೊಬ್ಬ ಸಹೋದರನಿಗೆ ಬರೋಬ್ಬರಿ 5 ರಿಂದ 6 ಲಕ್ಷ ರೂಪಾಯಿ ಮತ್ತು ತನ್ನ ಗರ್ಲ್‌ಫ್ರೆಂಡ್‌ಗೆ ದುಬಾರಿ ಬೆಲೆಯ ಐಫೋನ್ ಉಡುಗೊರೆಯಾಗಿ ನೀಡಿದ್ದಲ್ಲದೆ, ಆಕೆಯ ಬ್ಯಾಂಕ್ ಖಾತೆಗೆ 2.5 ಲಕ್ಷ ರೂಪಾಯಿ ಹಣವನ್ನು ನೇರವಾಗಿ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ, ಬಂಧಿತ ಎಂಟು ಮಂದಿ ಶಂಕಿತ ಆರೋಪಿಗಳ ಪೈಕಿ ಅವಿನಾಶ್ ಶುಕ್ಲಾ ಅತ್ಯಂತ ಹೆಚ್ಚು ಅಂದರೆ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೇವಸ್ಥಾನದಿಂದ ನೇರವಾಗಿ ತನ್ನ ಮನೆಗೆ ಸಾಗಿಸಿದ್ದ ಎಂಬುದು ಪತ್ತೆಯಾಗಿದೆ. ಇದು ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾದ ರಾಮಮಂದಿರದ ಪವಿತ್ರ ಕಾಣಿಕೆ ಹಣವನ್ನು ಈ ರೀತಿ ವೈಯಕ್ತಿಕ ಆಸೆಗಳಿಗಾಗಿ ಲೂಟಿ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಆರೋಪಗಳನ್ನು ರೂಪಿಸಲು ಹಣದ ಸ್ಪಷ್ಟ ಜಾಡನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಈಗ ಈ ಹಣಕಾಸಿನ ವಹಿವಾಟುಗಳು, ಬ್ಯಾಂಕ್ ಖಾತೆಗಳು ಮತ್ತು ಸಂಬಂಧಿತ ಆಸ್ತಿಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).