ಮುಂಬೈ: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಇರಾನ್-ಅಮೆರಿಕ ನಡುವಿನ ಯುದ್ಧದ ಕಾರ್ಮೋಡಗಳು ಭಾರತೀಯ ಷೇರು ಮಾರುಕಟ್ಟೆಯನ್ನು ನಡುಗಿಸಿವೆ. ಸೋಮವಾರ ವಾರಾರಂಭದ ವಹಿವಾಟಿನಲ್ಲೇ ಹೂಡಿಕೆದಾರರಿಗೆ ಭಾರಿ ಹೊಡೆತ ಬಿದ್ದಿದ್ದು, ಬಿಎಸ್‌ಇ ಸೆನ್ಸೆಕ್ಸ್ (Sensex) ಬರೋಬ್ಬರಿ 1,520 ಪಾಯಿಂಟ್ಸ್ ಕುಸಿತ ಕಂಡು 73,012 ರ ಮಟ್ಟಕ್ಕೆ ತಲುಪಿದೆ. ಇತ್ತ ಎನ್‌ಎಸ್‌ಇ ನಿಫ್ಟಿ (Nifty) ಕೂಡ 485 ಪಾಯಿಂಟ್ಸ್ ಕುಸಿದು 22,629 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಪಶ್ಚಿಮ ಏಷ್ಯಾದಲ್ಲಿ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ತಿಳಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ವಿಶೇಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೀಡಿದ 48 ಗಂಟೆಗಳ ಗಡುವು ಮತ್ತು ಹಾರ್ಮುಜ್ ಜಲಸಂಧಿ ಮುಚ್ಚುವ ಬೆದರಿಕೆಗಳು ಕಚ್ಚಾ ತೈಲದ ಬೆಲೆಯನ್ನು ಏರಿಸಿವೆ. ಈ ಅನಿಶ್ಚಿತತೆಯು ಜಾಗತಿಕ ಮಾರುಕಟ್ಟೆಯಲ್ಲಿ 'ರಿಸ್ಕ್-ಆಫ್' ವಾತಾವರಣ ಸೃಷ್ಟಿಸಿದ್ದು, ಷೇರುಗಳು ಮಾತ್ರವಲ್ಲದೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳೂ ಕೂಡ ತೀವ್ರವಾಗಿ ಕುಸಿದಿವೆ.
ಯಾರಿಗೆ ನಷ್ಟ? ಯಾರಿಗೆ ಲಾಭ?
ಮಾರುಕಟ್ಟೆಯ ಈ ರಕ್ತಪಾತದಲ್ಲಿ ಟಾಟಾ ಸ್ಟೀಲ್ (Tata Steel) ಅತಿ ಹೆಚ್ಚು ಅಂದರೆ ಶೇ. 4.30 ರಷ್ಟು ನಷ್ಟ ಅನುಭವಿಸಿದೆ. ಉಳಿದಂತೆ ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್, ಟೈಟಾನ್ ಮತ್ತು ಬಿಇಎಲ್ ಕಂಪನಿಗಳ ಷೇರುಗಳು ಶೇ. 3 ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಇಂತಹ ಭೀಕರ ಕುಸಿತದ ನಡುವೆಯೂ ಐಟಿ ದೈತ್ಯಗಳಾದ ಎಚ್‌ಸಿಎಲ್ ಟೆಕ್ ಮತ್ತು ಟಿಸಿಎಸ್ ಮಾತ್ರ ಅಲ್ಪ ಲಾಭದಲ್ಲಿವೆ.
ತಜ್ಞರ ಸಲಹೆ ಏನು?
"ಈ ಯುದ್ಧದ ಬಿಕ್ಕಟ್ಟು ಯಾವಾಗ ಕೊನೆಗೊಳ್ಳುತ್ತದೆ ಎಂಬ ಸ್ಪಷ್ಟತೆ ಇಲ್ಲ. ಇಂತಹ ಸಮಯದಲ್ಲಿ ಹೂಡಿಕೆದಾರರು ಗಾಬರಿಯಾಗಬಾರದು" ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ನ ಡಾ. ವಿ.ಕೆ. ವಿಜಯಕುಮಾರ್ ತಿಳಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿತವು ಔಷಧ (Pharma) ಮತ್ತು ಆಟೋಮೊಬೈಲ್ ರಫ್ತುದಾರರಿಗೆ ವರದಾನವಾಗಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ,(ಏಜೆನ್ಸೀಸ್).