ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ(ಜ.08) ಭಾರಿ ಕುಸಿತ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು 780 ಪಾಯಿಂಟ್‌ಗಳಷ್ಟು ಇಳಿಕೆಯಾಗಿ 84,180 ಮಟ್ಟಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 260ಕ್ಕೂ ಹೆಚ್ಚು ಪಾಯಿಂಟ್‌ಗಳ ಕುಸಿತದೊಂದಿಗೆ 25,876ಕ್ಕೆ ಅಂತ್ಯಗೊಂಡಿದೆ.
ಮಾರುಕಟ್ಟೆಯ ಈ ದಿಢೀರ್ ಪತನಕ್ಕೆ ಕಾರಣಗಳು..!
1. ಅಮೆರಿಕದ ಸುಂಕದ ಭೀತಿ (Trump Tariffs)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳ ಮೇಲೆ ಬರೋಬ್ಬರಿ 500% ರಷ್ಟು ಸುಂಕ ವಿಧಿಸುವ ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂಬ ವರದಿಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇದು ಭಾರತದ ರಫ್ತು ವಲಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ಭಯ ಮಾರುಕಟ್ಟೆಯನ್ನು ಕೆಳಕ್ಕೆ ತಳ್ಳಿದೆ.
2. ಮೆಟಲ್ ಮತ್ತು ಐಟಿ ಷೇರುಗಳ ಪತನ
ಜಾಗತಿಕವಾಗಿ ಲೋಹಗಳ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ನಿಫ್ಟಿ ಮೆಟಲ್ ಸೂಚ್ಯಂಕ 3% ಕ್ಕಿಂತ ಹೆಚ್ಚು ಕುಸಿದಿದೆ. ಟಾಟಾ ಸ್ಟೀಲ್, ವೇದಾಂತ ಮತ್ತು ಹಿಂದೂಸ್ತಾನ್ ಜಿಂಕ್ ಷೇರುಗಳು ಭಾರಿ ನಷ್ಟ ಅನುಭವಿಸಿವೆ. ಇದರೊಂದಿಗೆ ಟಿಸಿಎಸ್ ಮತ್ತು ಇನ್ಫೋಸಿಸ್‌ನಂತಹ ಐಟಿ ದಿಗ್ಗಜ ಷೇರುಗಳೂ ಮಾರಾಟದ ಒತ್ತಡಕ್ಕೆ ಸಿಲುಕಿವೆ.
3. ವಿದೇಶಿ ಹೂಡಿಕೆದಾರರ ನಿರ್ಗಮನ (FII Outflows)
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸತತವಾಗಿ ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ. ಕೇವಲ ಒಂದು ದಿನದಲ್ಲೇ ಸಾವಿರಾರು ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿರುವುದು ಮಾರುಕಟ್ಟೆಯ ಅಸ್ಥಿರತೆಗೆ ಕಾರಣವಾಗಿದೆ,(ಏಜೆನ್ಸೀಸ್)