Stock market 
ದೇಶ

ತೈಲ ಬೆಲೆ ಏರಿಕೆ ಬಿಸಿಗೆ ಕರಗಿದ ಷೇರು ಮಾರುಕಟ್ಟೆ: 1,000 ಪಾಯಿಂಟ್ ಕುಸಿದ ಸೆನ್ಸೆಕ್ಸ್! | Stock market

ಮುಂಬೈ:ಭಾರತೀಯ ಷೇರು ಮಾರುಕಟ್ಟೆ(Stock market) ಇಂದು ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ. ಗುರುವಾರ (ಮಾರ್ಚ್ 12) ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಎರಡೂ ತೀವ್ರವಾಗಿ ಕುಸಿದಿದ್ದು, ಹೂಡಿಕೆದಾರರಲ್ಲಿ ಭೀತಿ ಮೂಡಿಸಿದೆ. ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಹೂಡಿಕೆದಾರರು ಬರೋಬ್ಬರಿ 14 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಗುರುವಾರ ಮುಂಜಾನೆ ಸೆನ್ಸೆಕ್ಸ್ ಸುಮಾರು 1,000 ಪಾಯಿಂಟ್‌ಗಳಷ್ಟು (ಶೇ. 1.3) ಭಾರಿ ಕುಸಿತ ಕಂಡಿದೆ. ಇತ್ತ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ-50 ಸಹ 300 ಪಾಯಿಂಟ್‌ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, 23,550 ಮಟ್ಟಕ್ಕೆ ತಲುಪಿದೆ. ಈ ವಾರವೊಂದರಲ್ಲೇ ಸೆನ್ಸೆಕ್ಸ್ 3,000 ಪಾಯಿಂಟ್‌ಗಳಿಗಿಂತ ಹೆಚ್ಚು ಅಂದರೆ ಶೇಕಡಾ 4 ರಷ್ಟು ಕುಸಿದಿದೆ.

ಮಾರುಕಟ್ಟೆ ಕುಸಿತಕ್ಕೆ ಪ್ರಮುಖ 5 ಕಾರಣಗಳು

1. ಗಗನಕ್ಕೇರುತ್ತಿರುವ ಕಚ್ಚಾ ತೈಲ ಬೆಲೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಮತ್ತೆ ಬ್ಯಾರೆಲ್‌ಗೆ $100 ದಾಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿ ಮತ್ತು ಮಧ್ಯಪ್ರಾಚ್ಯದಲ್ಲಿನ ಅಸ್ಥಿರತೆಯು ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದೆ. ಇದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ.

2.ತುರ್ತು ತೈಲ ದಾಸ್ತಾನು ಬಿಡುಗಡೆ

ಅಂತರಾಷ್ಟ್ರೀಯ ಇಂಧನ ಸಂಸ್ಥೆಯ (IEA) 32 ಸದಸ್ಯ ರಾಷ್ಟ್ರಗಳು ಮಾರುಕಟ್ಟೆಗೆ 400 ಮಿಲಿಯನ್ ಬ್ಯಾರೆಲ್ ತುರ್ತು ತೈಲ ದಾಸ್ತಾನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ. ಯುದ್ಧದ ಕಾರಣದಿಂದ ಉಂಟಾಗಿರುವ ತೈಲ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದ್ದರೂ, ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಮುಂದುವರಿದಿದೆ.

3.ಜಾಗತಿಕ ಹಣದುಬ್ಬರ ಮತ್ತು ಬಡ್ಡಿದರ ಹೆಚ್ಚಳ

ಅಮೆರಿಕ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಹಣದುಬ್ಬರ ಏರುತ್ತಿರುವುದು ಮತ್ತು ಬಡ್ಡಿದರ ಹೆಚ್ಚಳದ ಭೀತಿಯು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳಲು ಕಾರಣವಾಗಿದೆ.

4. ಯುದ್ಧದ ಕಾರ್ಮೋಡ

ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯು ಜಾಗತಿಕ ಆರ್ಥಿಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದು ನೇರವಾಗಿ ಹೂಡಿಕೆದಾರರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.

5. ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಆತಂಕ

ಅನೇಕ ದೊಡ್ಡ ಕಂಪನಿಗಳ ಲಾಭದ ಪ್ರಮಾಣ ಇಳಿಕೆಯಾಗುವ ಭೀತಿಯೂ ಮಾರುಕಟ್ಟೆಯ ಸೆಂಟಿಮೆಂಟ್ ಮೇಲೆ ಪರಿಣಾಮ ಬೀರಿದೆ.

ಹೂಡಿಕೆದಾರರಿಗೆ ಭಾರಿ ನಷ್ಟ

ಬಿಎಸ್‌ಇ (BSE) ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಶುಕ್ರವಾರ ಇದ್ದ 450 ಲಕ್ಷ ಕೋಟಿ ರೂಪಾಯಿಗಳಿಂದ ಇಂದು 436 ಲಕ್ಷ ಕೋಟಿ ರೂಪಾಯಿಗಳಿಗೆ ಕುಸಿದಿದೆ. ಇದರಿಂದಾಗಿ ಹೂಡಿಕೆದಾರರ ಒಟ್ಟು 14 ಲಕ್ಷ ಕೋಟಿ ರೂಪಾಯಿ ಮೌಲ್ಯದ ಷೇರುಗಳು ಧೂಳೀಪಟವಾಗಿವೆ,(ಏಜೆನ್ಸೀಸ್).