ಬೆಳ್ಳಿ ಬೆಲೆ ಏರಿಕೆ, ಷೇರುಪೇಟೆ ಕುಸಿತ 
ದೇಶ

ಬೆಳ್ಳಿ ಬೆಲೆ ಸಾವಿರ ರೂ. ಏರಿಕೆ! ಷೇರು ಮಾರುಕಟ್ಟೆ ಮತ್ತಷ್ಟು ಕುಸಿತ

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,000 ರೂ. ಏರಿಕೆ
  • ಷೇರು ಮಾರುಕಟ್ಟೆ ಮತ್ತಷ್ಟು ಕುಸಿತ
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಬಲ ಪ್ರವೃತ್ತಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,000 ರೂ. ಏರಿಕೆಯಾಗುವ ಮೂಲಕ 2.41 ಲಕ್ಷ ರೂ.ಗಳ ಹೊಸ ದಾಖಲೆ ಬರೆದಿದೆ. ಆದರೆ, ಚಿನ್ನದ ಬೆಲೆ ಸತತ ಎರಡನೇ ದಿನವೂ ಕುಸಿತ ಕಂಡಿದೆ. 
ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 2,800 ರೂ. ಇಳಿಕೆಯಾಗಿದೆ. ಸೋಮವಾರ 1,41,800 ರೂ. ಇದ್ದದ್ದು ಮಂಗಳವಾರ 1,39,000 ರೂ.ಗೆ ತಲುಪಿದೆ. ಸೋಮವಾರವಷ್ಟೇ ಬೆಳ್ಳಿಯ ಬೆಲೆ ಭಾರಿ ಪ್ರಮಾಣದಲ್ಲಿ ಅಂದರೆ ಶೇ. 6 ರಷ್ಟು (14,387 ರೂ.) ಜಿಗಿತ ಕಂಡು ಪ್ರತಿ ಕೆಜಿಗೆ 2,54,174 ರೂ.ಗಳ ದಾಖಲೆಯ ಮಟ್ಟವನ್ನು ತಲುಪಿತ್ತು.

ಬೆಂಗಳೂರಿನಲ್ಲಿ ದರ: ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ 12,860 ರೂ. ಇತ್ತು. 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ 14,028 ರೂ. ಇತ್ತು. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,44,300 ರೂ. ಇತ್ತು.

ಷೇರು ಮಾರುಕಟ್ಟೆ ಮತ್ತಷ್ಟು ಕುಸಿತ

ವರ್ಷಾಂತ್ಯದ ಮಂದಗತಿ ವಹಿವಾಟು ಮತ್ತು ವಿದೇಶಿ ಹೂಡಿಕೆದಾರರ ನಿರಂತರ ಹೂಡಿಕೆ ಹಿಂತೆಗೆತದ ಹಿನ್ನೆಲೆಯಲ್ಲಿ ಮಂಗಳವಾರ ಷೇರು ಮಾರುಕಟ್ಟೆ ಅಲ್ಪ ಕುಸಿತ ಕಂಡಿದೆ. ಸೆನ್ಸೆಕ್ಸ್ 20.46 ಅಂಕ ಇಳಿಕೆಯಾಗಿ 84,675.08ಕ್ಕೆ ತಲುಪಿದರೆ, ನಿಫ್ಟಿ 3.25 ಅಂಕ ಕುಸಿದು 25,938.85ಕ್ಕೆ ಸ್ಥಿರವಾಯಿತು. 

ಸತತ ಐದನೇ ದಿನವೂ ಮಾರುಕಟ್ಟೆ ಇಳಿಮುಖವಾಗಿದೆ. ಸೋಮವಾರ ವಿದೇಶಿ ಹೂಡಿಕೆದಾರರು 2,759.89 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಪ್ರತಿ ಬ್ಯಾರೆಲ್ಗೆ 62.23 ಡಾಲರ್ಗೆ ಏರಿಕೆಯಾಗಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಸೆನ್ಸೆಕ್ಸ್ನಲ್ಲಿ ಶೇ. 8ಕ್ಕೂ ಹೆಚ್ಚು ಏರಿಕೆಯಾಗಿದ್ದು ಹೂಡಿಕೆದಾರರ ಸಂಪತ್ತು 30.20 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.