ಷೇರುಪೇಟೆ, ಚಿನ್ನ-ಬೆಳ್ಳಿ ದರ  
ದೇಶ

ಷೇರುಪೇಟೆ ಭಾರಿ ಕುಸಿತ; ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ

ಪ್ರಮುಖ ಮುಖ್ಯಾಂಶಗಳು

  • ಷೇರುಪೇಟೆ ಭಾರಿ ಕುಸಿತ
  • ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ

ಮುಂಬೈ: ವಾರದ ಕೊನೆಯ ದಿನವಾದ ಶುಕ್ರವಾರ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಹೂಡಿಕೆದಾರರ ಸುಮಾರು 7.02 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋಗಿದೆ. ಐಟಿ ಕಂಪನಿಗಳ ವ್ಯವಹಾರಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಧಕ್ಕೆಯಾಗಬಹುದು ಎಂಬ ಆತಂಕ ಮತ್ತು ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಪ್ರವೃತ್ತಿ ಈ ಕುಸಿತಕ್ಕೆ ಕಾರಣವಾಗಿದೆ.

ಸೆನ್ಸೆಕ್ಸ್ 1,048 ಅಂಕ (ಶೇ. 1.25) ಕುಸಿದು 82,626ಕ್ಕೆ ತಲುಪಿದರೆ, ನಿಫ್ಟಿ 336 ಅಂಕ ಇಳಿಕೆಯಾಗಿ 25,471 ಅಂಕಕ್ಕೆ ತಲುಪಿದೆ. ನಿಫ್ಟಿ ಹತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಭಾರತೀಯ ಐಟಿ ಕಂಪನಿಗಳ ಸಾಂಪ್ರದಾಯಿಕ ಸೇವಾ ಮಾದರಿಗೆ ಎಐ ತಂತ್ರಜ್ಞಾನ ಸವಾಲು ಒಡ್ಡಲಿದೆ ಎಂಬ ಭೀತಿಯಿಂದಾಗಿ ಟಿಸಿಎಸ್, ಎಚ್​ಸಿಎಲ್ ಟೆಕ್ ಮತ್ತಿತರ ಕಂಪನಿಗಳ ಷೇರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕೆಳಗೆ ಇಳಿದಿದೆ.

ಮತ್ತೊಂದೆಡೆ, ರಷ್ಯಾ ಮತ್ತೆ ಡಾಲರ್ ವ್ಯವಹಾರಕ್ಕೆ ಮರಳಬಹುದು ಎಂಬ ಸುದ್ದಿಯಿಂದಾಗಿ ಡಾಲರ್ ಮೌಲ್ಯ ಹೆಚ್ಚಾಗಿದ್ದು, ಇದು ಲೋಹದ ಕಂಪನಿಗಳ ಷೇರುಗಳಲ್ಲಿ ಭಾರಿ ಪ್ರಾಫಿಟ್ ಬುಕಿಂಗ್​ಗೆ ಕಾರಣವಾಯಿತು. ಬಿಎಸ್​ಇನಲ್ಲಿ 2,960 ಷೇರುಗಳು ಕುಸಿತ ಕಂಡರೆ, 1,253 ಷೇರುಗಳು ಲಾಭ ಗಳಿಸಿದವು.

ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ

ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನ-ಬೆಳ್ಳಿ ಬೆಲೆ ಶೇ. 5ಕ್ಕಿಂತ ಹೆಚ್ಚು ಕುಸಿದಿದೆ. ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಬೆಳ್ಳಿ ದರ ಕೆಜಿಗೆ ಬರೋಬ್ಬರಿ 13,500 ರೂ. (ಶೇ. 5.03) ಕುಸಿದು 2,55,000 ರೂ.ಗೆ ತಲುಪಿದೆ. ಶೇ. 99.9 ಶುದ್ಧತೆಯ ಚಿನ್ನದ ಬೆಲೆಯೂ 10 ಗ್ರಾಂಗೆ 2,400 ರೂ. ಇಳಿಕೆಯಾಗಿದ್ದು, 1,58,500 ರೂ.ಗೆ ತಲುಪಿದೆ.