ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ಲ್ಯಾಂಡ್ ವಿಷಯದಲ್ಲಿ ಸಮಾಧಾನಕರ ನಿಲುವು ತಳೆದಿರುವುದು ಮತ್ತು ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದದ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಷೇರುಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಸತತ 3 ದಿನಗಳ ಕುಸಿತದ ನಂತರ ಗುರುವಾರ ಷೇರುಪೇಟೆ ಏರಿಕೆ ಕಂಡಿತು. ರೂಪಾಯಿ ಮೌಲ್ಯದಲ್ಲಿನ ಸಾಧಾರಣ ಚೇತರಿಕೆ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆ ಕೂಡ ಷೇರು ಮಾರುಕಟ್ಟೆಗೆ ಪೂರಕವಾಗಿ ಕೆಲಸ ಮಾಡಿವೆ.
ತೀವ್ರ ಏರಿಳಿತದ ವಹಿವಾಟಿನಲ್ಲಿ, ಸೆನ್ಸೆಕ್ಸ್ 397.74 ಅಂಕಗಳ ಏರಿಕೆಯೊಂದಿಗೆ 82,307.37 ಮಟ್ಟದಲ್ಲಿ ಸ್ಥಿರವಾಯಿತು. ವಹಿವಾಟಿನ ಮಧ್ಯೆ ಸೆನ್ಸೆಕ್ಸ್ 873.55 ಅಂಕ ಜಿಗಿದು 82,783.18ರ ಗರಿಷ್ಠ ಮಟ್ಟ ತಲುಪಿತ್ತು. ಆದರೆ, ಮಾರಾಟದ ಒತ್ತಡ ಹೆಚ್ಚಾದ ಕಾರಣ ಏರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಕಾಯ್ದುಕೊಳ್ಳಲು ಮಾರುಕಟ್ಟೆಗೆ ಸಾಧ್ಯವಾಗಲಿಲ್ಲ. ನಿಫ್ಟಿ 132.40 ಅಂಕಗಳ ಏರಿಕೆ ಕಂಡು 25,289.90 ಮಟ್ಟದಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತು.
ವಹಿವಾಟಿನ ಮಧ್ಯೆ ನಿಫ್ಟಿ 278.25 ಅಂಕಗಳ ಲಾಭದೊಂದಿಗೆ 25,435.75ರ ಗರಿಷ್ಠ ಮಟ್ಟ ತಲುಪಿತ್ತು. ಬುಧವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,787.66 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 4,520.47 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.10ರಷ್ಟು ಕುಸಿದು ಪ್ರತಿ ಬ್ಯಾರಲ್ಗೆ 64.52 ಡಾಲರ್ಗೆ ತಲುಪಿದೆ.
ಹೂಡಿಕೆದಾರರು ಲಾಭದ ನಗದೀಕರಣಕ್ಕೆ (ಪ್ರಾಫಿಟ್ ಬುಕಿಂಗ್) ಮುಂದಾಗಿದ್ದು ಮತ್ತು ಜಾಗತಿಕ ಮಾರುಕಟ್ಟೆಯ ಮಂದಗತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ತಮ್ಮ ದಾಖಲೆಯ ಗರಿಷ್ಠ ಮಟ್ಟದಿಂದ ಕೆಳಗಿಳಿದಿವೆ. ಬುಧವಾರದಂದು 10 ಗ್ರಾಂಗೆ 1,59,700 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಶೇ. 99.9 ಶುದ್ಧತೆಯ ಚಿನ್ನದ ಬೆಲೆ, ಗುರುವಾರ 2,500 ರೂ. ಇಳಿಕೆಯಾಗಿ 1,57,200 ರೂ.ಗೆ ತಲುಪಿತು.
ಬೆಳ್ಳಿಯ ಸತತ 9 ದಿನಗಳ ಏರಿಕೆಗೂ ಗುರುವಾರ ಬ್ರೇಕ್ ಬಿತ್ತು. ಬುಧವಾರ ಪ್ರತಿ ಕೆಜಿಗೆ 3,34,300 ರೂ. ಇದ್ದ ಬೆಳ್ಳಿ ದರ, ಗುರುವಾರ ಒಂದೇ ದಿನ 14,300 ರೂ.ನಷ್ಟು ಭಾರಿ ಕುಸಿತ ಕಂಡು 3,20,000 ರೂ.ಗೆ ತಲುಪಿತು. ಬುಧವಾರ ಬೆಳ್ಳಿ ದರ 11,300 ರೂ. ಏರಿಕೆ ಕಂಡಿತ್ತು.