Gautam Gambhir | ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ( ಕೃಪೆ -ಪಿಟಿಐ)
ಗುವಾಹಟಿ: ನಾನು ಕೋಚ್ ಆಗಿ ಮುಂದುವರೆಯಬೇಕೋ ಬೇಡವೋ ಎನ್ನುವುದು ಬಿಸಿಸಿಐಗೆ ಬಿಟ್ಟ ವಿಚಾರ, ನಾನು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ಪತ್ರಿಕಾಗೋಷ್ಠಿಯ ಮಾತಿಗೆ ಈಗಲೂ ಬದ್ಧನಿದ್ದು, ನನಗೆ ನನಗಿಂತ ಭಾರತೀಯ ಕ್ರಿಕೆಟ್ ಮುಖ್ಯ ಎಂದು ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಟೆಸ್ಟ್ ಮಾದರಿಯ ಕೋಚ್ ಹುದ್ದೆಗೆ ಗಂಭೀರ್ ಸೂಕ್ತ ವ್ಯಕ್ತಿಯೇ ಎಂಬ ವರದಿಗಾರರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
ಮಾಧ್ಯಮಗಳು ಯಶಸ್ಸನ್ನು ಕಡೆಗಣಿಸುತ್ತಿವೆ, ಸೋಲುಗಳ ಮೇಲೆ ಮಾತ್ರ ತಮ್ಮ ಗಮನವನ್ನು ಕೇಂದ್ರಿಕರಿಸಿವೆ. ಇಂಗ್ಲೆಂಡ್‌ನಲ್ಲಿ ಯುವ ತಂಡ ಕಟ್ಟಿಕೊಂಡು ಉತ್ತಮ ಫಲಿತಾಂಶ ಪಡೆದ ವ್ಯಕ್ತಿ ನಾನು. ನೀವು ಅದನ್ನು ಬೇಗನೆ ಮರೆತುಬಿಡುತ್ತೀರಿ. ಅನೇಕರು ನ್ಯೂಜಿಲೆಂಡ್ ಸೋಲಿನ ಬಗ್ಗೆಯೇ ಮಾತನಾಡುತ್ತಾರೆ. ಅಷ್ಟೇನು ಅನುಭವವಿಲ್ಲದ ತಂಡದೊಂದಿಗೆ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದಿದ್ದೇನೆ, ಇದು ಇನ್ನೂ ಕಲಿಯುತ್ತಿರುವ ತಂಡ ಎಂದು ಸಮರ್ಥಿಸಿಕೊಂಡರು.
ಭಾರತ ತಂಡದ ಮುಖ್ಯ ತರಬೇತುದಾರನಾಗಿ ಯಾವುದೇ ರೀತಿಯ ನೆಪ ಹೇಳಲು ಬಯಸುವುದಿಲ್ಲ, ಇದು ಪರಿವರ್ತನೆ ಹಂತದಲ್ಲಿರುವ ತಂಡವಾಗಿದ್ದು, ಇದರಲ್ಲಿನ ಅನೇಕ ಬ್ಯಾಟ್ಸ್‌ಮನ್‌ಗಳು 20 ಟೆಸ್ಟ್‌ಗಳಿಗಿಂತ ಕಡಿಮೆ ಪಂದ್ಯದಲ್ಲಿ ಆಡಿದ್ದಾರೆ. ಆದ್ದರಿಂದ ಟೆಸ್ಟ್ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಅವರಿಗೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ, ಆದರೆ ಮೊದಲ ಇನ್ನಿಂಗ್ಸ್‌ನಲ್ಲಿನ ಕುಸಿತವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ನಾವು ಉತ್ತಮವಾಗಿ ಆಡಬೇಕಾಗಿತ್ತು. ಒಂದು ಹಂತದಲ್ಲಿ 95 ಕ್ಕೆ1 ವಿಕೆಟ್ ಕಳೆದುಕೊಂಡಿದ್ದ ತಂಡ, 122 ಆಗುವಷ್ಟರಲ್ಲಿ ಎದುರಾಳಿಗೆ 7 ವಿಕೆಟ್ ಒಪ್ಪಿಸಿದ್ದು ಸರಿಯಲ್ಲ. ಯಾವುದೇ ವ್ಯಕ್ತಿಯನ್ನು ಅಥವಾ ಯಾವುದೇ ನಿರ್ದಿಷ್ಟ ಹೊಡೆತವನ್ನು ದೂಷಿಸಲು ಸಾಧ್ಯವಿಲ್ಲ, ಆರೋಪ ಎಲ್ಲರ ಮೇಲೂ ಇರುತ್ತದೆ. ನಾನು ಇಲ್ಲಿಯವರೆಗೆ ವ್ಯಕ್ತಿಗತವಾಗಿ ಯಾರನ್ನು ಟೀಕಿಸಿಲ್ಲ, ಮುಂದೆಯೂ ಟೀಕಿಸುವುದಿಲ್ಲ ಎಂದು ಹೇಳಿದರು.
ತವರಿನಲ್ಲಿ ಎರಡು ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ ಮೊದಲ ಭಾರತೀಯ ಕೋಚ್ ಎಂಬ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಗಂಭೀರ್ ಮೇಲೆ ಒತ್ತಡ ಹೆಚ್ಚುತ್ತಿದೆ. ಟೆಸ್ಟ್ ಕೋಚ್ ಆಗಿ ನೇಮಕವಾದ ಮೊದಲ ವರ್ಷದಲ್ಲೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 0–3 ಅಂತರದಲ್ಲಿ ಸೋಲನುಭವಿಸಿದ್ದು, ಈಗ ದಕ್ಷಿಣ ಆಫ್ರಿಕಾ ವಿರುದ್ಧ 0–2 ಸರಣಿ ಸೋತಿದೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ತೆಗೆದುಕೊಂಡ ಬಳಿಕ ಭಾರತ ತಂಡ ತವರಿನಲ್ಲಿ ಆಡಿದ ಕೊನೆಯ ಏಳು ಟೆಸ್ಟ್ ಪಂದ್ಯಗಳಲ್ಲಿ ಐದರಲ್ಲಿ ಸೋಲನುಭವಿಸಿದ್ದು, ಒಟ್ಟು 19 ಪಂದ್ಯಗಳಲ್ಲಿ 10 ರಲ್ಲಿ ಪರಾಜಯಗೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 408 ರನ್ಗಳ ಭಾರೀ ಸೋಲಿನ ಮೂಲಕ ವೈಟ್ವಾಷ್ ಮುಖಭಂಗಕ್ಕೆ ತುತ್ತಾಗಿದೆ(ಏಜೆನ್ಸೀಸ್).