ದೇಶ

ಅಮಿತ್ ಶಾ ವಿರುದ್ಧ ಹೇಳಿಕೆ: ಮಾನನಷ್ಟ ಪ್ರಕರಣದಿಂದ ರಾಹುಲ್ ಗಾಂಧಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ | Rahul Gandhi

2018ರಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಮತ್ತು ಪ್ರಸ್ತುತ ಕೇಂದ್ರ ಗೃಹಸಚಿವರಾಗಿರುವ ಅಮಿತ್ ಶಾ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಸೋಮವಾರ(ಅ. 26) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಖುಲಾಸೆಗೊಳಿಸಿದೆ.

ಲಖನೌ: 2018ರಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಮತ್ತು ಪ್ರಸ್ತುತ ಕೇಂದ್ರ ಗೃಹಸಚಿವರಾಗಿರುವ ಅಮಿತ್ ಶಾ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಸೋಮವಾರ(ಅ. 26) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಖುಲಾಸೆಗೊಳಿಸಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ರಾಯ್​ಬರೇಲಿ ಸಂಸದರಾಗಿರುವ ರಾಹುಲ್ ಗಾಂಧಿ ತೀರ್ಪು ಪ್ರಕಟವಾಗುವ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆಗಳು ಮಾನನಷ್ಟ ಉಂಟುಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟ, ನ್ಯಾಯಾಲಯವು ಅವರನ್ನು 'ದೋಷಮುಕ್ತ' ಎಂದು ಘೋಷಿಸಿದೆ.

ನ್ಯಾಯಾಲಯ ಖುಲಾಸೆಗೊಳಿಸಿದ ತೀರ್ಪು ನೀಡುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು. ಮತ್ತು ಎಕ್ಸ್​ ಖಾತೆಯಲ್ಲಿ ಕಾಂಗ್ರೆಸ್ ಸತ್ಯವೊಂದೇ ಗೆಲವು ಎಂದು ಪೋಸ್ಟ್ ಹಾಕಿ ತೀರ್ಪನ್ನು ಸ್ವಾಗತಿಸಿದೆ.

ಇನ್ನೂ 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಡೆದ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಮಾಡಿದ ಹೇಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸುಲ್ತಾನ್‌ಪುರದ ಜಿಲ್ಲಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆಗಿರುವ ಸ್ಥಳೀಯ ಬಿಜೆಪಿ ರಾಜಕಾರಣಿ ವಿಜಯ್ ಮಿಶ್ರಾ ಅವರು 2018 ಆಗಸ್ಟ್ 4ರಂದು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ 2023 ರಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದರು. ಬಳಿಕ ಅಕ್ಟೋಬರ್ 13 ರಂದು ತೀರ್ಪು ಪ್ರಕಟಿಸಲು ನ್ಯಾಯಾಲಯ ನಿರ್ಧರಿಸಿತ್ತು. ಬಳಿಕ ಅಕ್ಟೋಬರ್ 26 ರಂದು ತೀರ್ಪು ಪ್ರಕಟಿಸಲು ನಿರ್ಧರಿಸಿತು (ಏಜೆನ್ಸೀಸ್).