Sharad Pawar-Shinde Meet |ಪವಾರ್-ಶಿಂಧೆ ಭೇಟಿಗೆ ಮಾಜಿ ಸಿಎಂ ಚೌಹಾಣ್ ತೀವ್ರ ಆಕ್ರೋಶ
ಮುಂಬೈ: ಮಹಾರಾಷ್ಟ್ರ ರಾಜಕಾರಣ ದಿನಗಳು ಕಳೆದಂತೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಭೇಟಿ ಮಾಡಿರುವುದು (Sharad Pawar-Shinde Meet) ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರ ನಡುವೆ ನೇರ ವಾಗ್ದಾಳಿ ಆರಂಭವಾಗಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಶರದ್ ಪವಾರ್ ನಿಷ್ಠೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದು, ಶರದ್ ಬಣದ ಐದರಿಂದ ಆರು ಸಂಸದರು ಸದ್ಯ ತಳಮಳಗೊಂಡಿದ್ದಾರೆ. ಅವರು ಮುಂದೆ ಏನು ಮಾಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಸದ್ಯಕ್ಕಂತೂ ಅವರು ಅಸ್ಥಿರತೆಯ ಸ್ಥಿತಿಯಲ್ಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಈ ಸಂಸದರ ಬೆಂಬಲಕ್ಕಾಗಿ ತುಂಬಾ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ ಚೌಹಾಣ್, ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದು ಎಂಬುದು ಅವರ ಆಸೆ. ಈ ಹಿಂದೆ ಉದ್ಧವ್ ಠಾಕ್ರೆ ಶಿವಸೇನೆಗೆ ಏನಾಯಿತೋ, ಅದೇ ಪರಿಸ್ಥಿತಿ ಪವಾರ್ ಸಾಹೇಬರ ಎನ್‌ಸಿಪಿಗೂ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.
ಉದ್ಧವ್ ಬಣದ ಕಥೆ ಇದು!..
ಕಳೆದ ತಿಂಗಳಷ್ಟೇ ಉದ್ಧವ್ ಠಾಕ್ರೆ ಬಣದ ಆರು ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಜಿಗಿದಿರುವುದು ವಿರೋಧ ಪಕ್ಷಗಳ ಪಾಳಯದಲ್ಲಿ ಈಗಾಗಲೇ ಭಾರಿ ನಡುಕ ಸೃಷ್ಟಿಸಿದೆ. ಉದ್ಧವ್ ತಮ್ಮ ಬಣವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ಯೋಜಿಸುತ್ತಿದ್ದಾರೆ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆರೋಪಿಸಿ ಈ ಸಂಸದರು ಬಂಡಾಯವೆದ್ದಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಅಗತ್ಯವಿರುವಷ್ಟು ಸಂಖ್ಯೆಯನ್ನು ಈ ಸಂಸದರು ಹೊಂದಿದ್ದರೂ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ದ್ರೋಹಿಯ ಚೇಂಬರ್‌ನಲ್ಲಿ ಸಭೆ ಏಕೆ..? ಸಂಜಯ್ ರಾವತ್ ಆಕ್ರೋಶ
ಶಿವಸೇನೆಯನ್ನು ಒಡೆದು, ಉದ್ಧವ್ ಠಾಕ್ರೆ ಸರ್ಕಾರ ಪತನಗೊಳ್ಳಲು ಕಾರಣರಾದ ಏಕನಾಥ್ ಶಿಂಧೆ ಅವರನ್ನು ಶರದ್ ಪವಾರ್ ಭೇಟಿಯಾಗಿರುವುದು ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಕೆಂಗಣ್ಣಿಗೆ ಗುರಿಯಾಗಿದೆ. ಪವಾರ್ ಸಾಹೇಬರು ಸಭೆ ನಡೆಸಲು ಶಿಂಧೆ ಅವರ ಚೇಂಬರ್ ಅನ್ನೇ ಏಕೆ ಆರಿಸಿಕೊಂಡರು..? ಇಡೀ ವಿಧಾನ ಭವನವೇ ಖಾಲಿಯಿತ್ತಲ್ಲವೇ..? ನಮ್ಮ ಸರ್ಕಾರವನ್ನು ಉರುಳಿಸಿದ ದ್ರೋಹಿಯ ಸೂರಿನಡಿ ಪಕ್ಷದ ಸಭೆ ನಡೆಸುವುದು ಶರದ್ ಪವಾರ್ ಅವರ ಘನತೆ ಮತ್ತು ವ್ಯಕ್ತಿತ್ವವನ್ನು ಕುಗ್ಗಿಸುತ್ತದೆ ಎಂದು ರಾವತ್ ಅಸಮಾಧಾನ ಹೊರಹಾಕಿದ್ದಾರೆ.
ಬುಧವಾರ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಶರದ್ ಪವಾರ್ ವಿಧಾನಸಭೆಗೆ ಭೇಟಿ ನೀಡಿದ್ದರು. ಸಭೆಯ ನಂತರ ಅವರು ಅಸೆಂಬ್ಲಿ ಆವರಣದಲ್ಲಿದ್ದ ಶಿಂಧೆ ಕಚೇರಿಗೆ ತೆರಳಿ ಭೇಟಿಯಾಗಿದ್ದಲ್ಲದೆ, ಅಲ್ಲಿಯೇ ತಮ್ಮ ಪಕ್ಷದ ಶಾಸಕರ ಸಭೆಯನ್ನೂ ನಡೆಸಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದರು.
ನಾವು ಎಲ್ಲೂ ಹೋಗುತ್ತಿಲ್ಲ ಎಂದು ಎನ್‌ಸಿಪಿ ತಿರುಗೇಟು!...
ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ಹೇಳಿಕೆಗೆ ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಯಾರೂ ಎಲ್ಲೂ ಹೋಗುತ್ತಿಲ್ಲ, ನಮ್ಮ 8 ಸಂಸದರು ಮತ್ತು 10 ಶಾಸಕರು ಒಗ್ಗಟ್ಟಾಗಿದ್ದಾರೆ. ಮತ್ತೊಂದು ಪಕ್ಷದ ಬಗ್ಗೆ ಇಂತಹ ಭವಿಷ್ಯ ನುಡಿಯುವುದು ಸರಿಯಲ್ಲ. ನಾಳೆ ನಾನು ಕಾಂಗ್ರೆಸ್ ಶಾಸಕರ ಬಗ್ಗೆ ಇಂತಹದೇ ಭವಿಷ್ಯ ಹೇಳಲು ಶುರು ಮಾಡಿದರೆ ಹೇಗಿರುತ್ತದೆ..? ಏನಾದರೂ ಘಟನೆ ನಡೆಯುವ ಮೊದಲು ಈ ರೀತಿ ಮಾತನಾಡುವುದು ಸೂಕ್ತವಲ್ಲ ಎಂದು ಪಾಟೀಲ್ ತಿರುಗೇಟು ನೀಡಿದ್ದಾರೆ.
ಈ ಬೆಳವಣಿಗೆಗಳು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಒಳಗಿನ ಆಂತರಿಕ ಬೇಗುದಿಯನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ(ಏಜೆನ್ಸೀಸ್).