ಭಾರತದಿಂದ ಯುಎಸ್ಗೆ ಸಿಕ್ಕ ಉಡುಗೊರೆಗಳಿವು
- ಭಾರತ ನೀಡಿದ ದುಬಾರಿ ಉಡುಗೊರೆಗಳ ಪಟ್ಟಿಯನ್ನು ಪ್ರಕಟಿಸಿದ ಅಮೆರಿಕ ವಿದೇಶಾಂಗ ಇಲಾಖೆ
- ಬೈಡನ್ಗೆ 7,750 ರೂ. ಮೌಲ್ಯದ ಬೆಳ್ಳಿ ರೈಲಿನ ಸೆಟ್
- ಭಾರತದಿಂದ ಸ್ವೀಕರಿಸಿದ ಗಿಫ್ಟ್ಗಳ ಪಟ್ಟಿಯನ್ನು ಪ್ರಕಟಿಸಿದ ಅಮೆರಿಕ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ನೀಡಿದ ಬೆಳ್ಳಿ ರೈಲು ಸೆಟ್ ಸೇರಿದಂತೆ ಅಮೆರಿಕದ ಉನ್ನತ ರಾಜಕಾರಣಿಗಳಿಗೆ ಕೊಟ್ಟ ದುಬಾರಿ ಉಡುಗೊರೆಗಳ ವಿವರಗಳನ್ನು ಇದೀಗ ಅಮೆರಿಕ ವಿದೇಶಾಂಗ ಇಲಾಖೆ ಬಹಿರಂಗಪಡಿಸಿದೆ.
ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 2024ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ 7,750 ಡಾಲರ್ ಮೌಲ್ಯದ ಸ್ಟರ್ಲಿಂಗ್ ಬೆಳ್ಳಿ ರೈಲು ಸೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಅದನ್ನು ರಾಷ್ಟ್ರೀಯ ದಾಖಲೆಗಳಿಗೆ ವರ್ಗಾಯಿಸಲಾಯಿತು. ಭಾರತದ ಪ್ರಧಾನಿ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಸೇರಿದಂತೆ ರಾಜಕೀಯ ನಾಯಕರು ನೀಡಿದ ಗಿಫ್ಟ್ಗಳು ಏನೆಲ್ಲ? ಎಂಬುದರ ವಿವರ ಹೀಗಿದೆ ಗಮನಿಸಿ.
ಸೆಪ್ಟೆಂಬರ್ 10, 2023ರಂದು, ಪ್ರಧಾನಿ ಮೋದಿ ಅವರು ಅಧ್ಯಕ್ಷ ಬೈಡನ್ ಅವರಿಗೆ 562 ಡಾಲರ್ ಮೌಲ್ಯದ ಸ್ಕಾರ್ಫ್, ಕೇಸರಿ ಮತ್ತು ಮರದ ಟೀ ಬಾಕ್ಸ್ಗಳನ್ನು ಉಡುಗೊರೆಯಾಗಿ ನೀಡಿದರು. ಚಹಾ ಮತ್ತು ಕೇಸರಿ ಮುಂತಾದ ವಸ್ತುಗಳನ್ನು ಹೊರತುಪಡಿಸಿ, ಉಳಿದ ವಸ್ತುಗಳನ್ನು ರಾಷ್ಟ್ರೀಯ ದಾಖಲೆಗಳಿಗೆ ಹಸ್ತಾಂತರಿಸಲಾಯಿತು. ಅಕ್ಟೋಬರ್ 21, 2024ರಂದು, ಜಿಲ್ ಬೈಡನ್ಗೆ 2,969 ಡಾಲರ್ ಮೌಲ್ಯದ ಪಶ್ಮಿನಾ ಶಾಲನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ಇದನ್ನೂ ರಾಷ್ಟ್ರೀಯ ದಾಖಲೆಗಳಿಗೆ ವರ್ಗಾಯಿಸಲಾಯಿತು ಎಂದು ವರದಿ ಹೇಳಿದೆ.
ಇನ್ನು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಅವರಿಗೆ 599 ಡಾಲರ್ ಮೌಲ್ಯದ ಕಾಶ್ಮೀರಿ ಪಶ್ಮಿನಾ ಸ್ಕಾರ್ಫ್ ಅನ್ನು ಉಡುಗೊರೆಯಾಗಿ ನೀಡಿದರು. ಇದನ್ನು ಸಾಮಾನ್ಯ ಸೇವೆಗಳ ಆಡಳಿತಕ್ಕೆ (GSA) ಕಳುಹಿಸಲಾಯಿತು. ಇದರಲ್ಲಿ, ಕಮಲಾ ಹ್ಯಾರಿಸ್ ಅವರ ಹೆಸರನ್ನು ಸಹ ಸೇರಿಸಲಾಗಿದೆ. ಅ.18, 2024ರಂದು, ಪ್ರಧಾನಿ ಮೋದಿ 1,330 ಡಾಲರ್ ಮೌಲ್ಯದ ಭಗವಾನ್ ಕೃಷ್ಣ ರಸ ಲೀಲಾ ಬೆಳ್ಳಿ ಪೆಟ್ಟಿಗೆಯನ್ನು ಹ್ಯಾರಿಸ್ಗೆ ಉಡುಗೊರೆಯಾಗಿ ನೀಡಿದ್ದು, ಅದನ್ನು ರಾಷ್ಟ್ರೀಯ ಆರ್ಕೈವ್ಸ್‌ಗೆ ವರ್ಗಾಯಿಸಲಾಯಿತು.
ಅದೇ ದಿನ, ಪ್ರಧಾನಿ ಮೋದಿ ಎರಡನೇ ಸಂಭಾವಿತ ಡೌಗ್ಲಾಸ್ ಎಮ್ಹಾಫ್ ಅವರಿಗೆ 585.65 ಡಾಲರ್ ಮೌಲ್ಯದ ಕಫ್ಲಿಂಕ್‌ಗಳನ್ನು ಸಹ ಉಡುಗೊರೆಯಾಗಿ ನೀಡಿದರು. ಇನ್ನು ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವೆಂಬರ್ 24, 2022ರಂದು ಆಗಿನ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೆ 3,700 ಡಾಲರ್ ಮೌಲ್ಯದ ಶಿವ ನಟರಾಜನ ಕಂಚಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ,(ಏಜೆನ್ಸೀಸ್).