ಸಿನಿಮಾ ಶೂಟಿಂಗ್ ಶುರು ಮಾಡಿ! ಪಾಕ್ ಬ್ಯಾಟರ್ ಕಾಲೆಳೆದ ಯುಜಿ ಚಾಹಲ್:
ಕೊಲೊಂಬೊ: ಮೈದಾನದಲ್ಲಿ ತಮ್ಮ ಸ್ಪಿನ್ ಜಾದೂವಿನಿಂದ ಬ್ಯಾಟರ್‌ಗಳನ್ನು ಮಂಕಾಗಿಸುವ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್(Yuzvendra Chahal), ಈಗ ತಮ್ಮ ಚತುರ ಮಾತುಗಳ ಮೂಲಕ ಸುದ್ದಿಯಲ್ಲಿದ್ದಾರೆ. 2026ರ ಟಿ20 ವಿಶ್ವಕಪ್‌ನ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಜಾದ ಫರ್ಹಾನ್ ಅವರನ್ನು ಚಾಹಲ್ ಕಾಲೆಳೆದಿದ್ದಾರೆ.
ಏನಿದು ಚಾಹಲ್ ಕಾಲೆಳೆಯುವ ತಂತ್ರ..?
ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಫರ್ಹಾನ್ 58 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು. ಈ ಪ್ರದರ್ಶನವನ್ನು ಗಮನಿಸಿದ ಚಾಹಲ್, ಜಿಯೋ ಹಾಟ್‌ಸ್ಟಾರ್‌ನಲ್ಲಿ ಕಾಮೆಂಟರಿ ವೇಳೆ ತಮಾಷೆಯಾಗಿ ಹೀಗೆಂದಿದ್ದಾರೆ.
ಶೀಘ್ರದಲ್ಲೇ ಫರ್ಹಾನ್ ಅವರ ಇನ್ನೊಂದು ಡಾಕ್ಯುಮೆಂಟರಿ ಬರಲಿದೆ. ಆ ಡಾಕ್ಯುಮೆಂಟರಿಯಲ್ಲಿ ಅವರು ನಮೀಬಿಯಾದ ಬೌಲರ್‌ಗಳಿಗೂ ಒಂದು ಪುಟ್ಟ ಪಾತ್ರವನ್ನು ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬೂಮ್ರಾಗೆ ಸಿಕ್ಸರ್ ಹೊಡೆದಿದ್ದಕ್ಕೆ ಡಾಕ್ಯುಮೆಂಟರಿ..!
ಸಾಹಿಬ್‌ಜಾದ ಫರ್ಹಾನ್ ಸುದ್ದಿಯಲ್ಲಿರುವುದು ಕೇವಲ ಅವರ ಬ್ಯಾಟಿಂಗ್‌ನಿಂದ ಮಾತ್ರವಲ್ಲ, ಅವರ ವಿಚಿತ್ರ ಪ್ರಚಾರದ ಶೈಲಿಯಿಂದಲೂ ಕೂಡ. 2025ರ ಏಷ್ಯಾ ಕಪ್ ಪಂದ್ಯದಲ್ಲಿ ಭಾರತದ ಮಾರಕ ವೇಗಿ ಜಸ್ಪ್ರೀತ್ ಬೂಮ್ರಾ ಅವರ ಓವರ್‌ನಲ್ಲಿ ಫರ್ಹಾನ್ ಎರಡು-ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದಾದ ನಂತರ ಅವರು ಒಂದು ಕಿರು ಡಾಕ್ಯುಮೆಂಟರಿ ಬಿಡುಗಡೆ ಮಾಡಿ, ಬೂಮ್ರಾರಂತಹ ವಿಶ್ವದ ಶ್ರೇಷ್ಠ ಬೌಲರ್‌ಗೆ ನಾನು ಹೇಗೆ ಸಿಕ್ಸರ್ ಹೊಡೆದೆ ಎಂದು ಹೇಳಿಕೊಂಡಿದ್ದರು.
ಚಾಹಲ್ ಅವರ ಇಂದಿನ ವ್ಯಂಗ್ಯ ನೇರವಾಗಿ ಆ ಡಾಕ್ಯುಮೆಂಟರಿಗೆ ಸಂಬಂಧಿಸಿದ್ದಾಗಿದೆ. ನಮೀಬಿಯಾದಂತಹ ಸಣ್ಣ ತಂಡದ ವಿರುದ್ಧ ಶತಕ ಹೊಡೆದಿದ್ದಕ್ಕೂ ಫರ್ಹಾನ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಎಂಬುದನ್ನು ಚಾಹಲ್ ಪರೋಕ್ಷವಾಗಿ ಟೀಕಿಸಿದ್ದಾರೆ.
ಪಾಕಿಸ್ತಾನ ತಂಡವು ಭಾರತದ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದರೂ, ನಮೀಬಿಯಾ ವಿರುದ್ಧದ ಈ ಗೆಲುವು ಅವರಿಗೆ ಟೂರ್ನಿಯಲ್ಲಿ ಜೀವದಾನ ನೀಡಿದೆ. ಆದರೆ, ಬೌಂಡರಿ ಗೆರೆ ದಾಟುವ ಮೊದಲು ಶತಕದ ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಿದ ಫರ್ಹಾನ್ ನಡೆ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).