- ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್
- ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸ್ಟಾರ್‌ಲಿಂಕ್ ಸಜ್ಜು
- ಈ ವರ್ಷದ ಅಂತ್ಯದ ವೇಳೆಗೆ ಲಭ್ಯ?
ನವದೆಹಲಿ: ಪ್ರಸ್ತುತ, ಭಾರತೀಯ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಎದುರುನೋಡುತ್ತಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್, ಇನ್ನೂ ಕೆಲವೇ ದಿನಗಳಲ್ಲಿ ಭಾರತಕ್ಕೆ ಅಧಿಕೃತವಾಗಿ ಲಗ್ಗೆ ಇಡಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಲಭ್ಯತೆಗೆ ಮುಂದಾಗಿರುವ ಮಸ್ಕ್, ಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ಈ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಸ್ಟಾರ್‌ಲಿಂಕ್ ಮೂಲಕ ನೀಡಲು ಸಜ್ಜಾಗಿರುವುದು ಕುತೂಹಲಕಾರಿ.
ಆದಾಗ್ಯೂ, ಈ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ಪಡೆಯಬೇಕಿದ್ದು, ಅದರ ಕೆಲಸಗಳಲ್ಲಿ ಸದ್ಯ ಮಸ್ಕ್ ಬಿಜಿಯಾಗಿದ್ದಾರೆ. ಬಹುತೇಕ ಎಲ್ಲವನ್ನೂ (ಸ್ಟಾರ್‌ಲಿಂಕ್ ಲಾಂಚ್ ದಿನಾಂಕ) ಅನುಮೋದಿಸಲಾಗಿದ್ದೇ ಆದರೂ, ಇನ್ನೂ ಒಂದಷ್ಟು ಕೆಲಸಗಳು ಬಾಕಿ ಉಳಿದಿವೆ. ಸ್ಟಾರ್‌ಲಿಂಕ್ ಸೇವೆಯು ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ ಎಂಬ ಹೊಸ ಅಲೆ ಈಗಾಗಲೇ ಟೆಲಿಕಾಂ ಕ್ಷೇತ್ರಗಳಲ್ಲಿ ಜೋರಾಗಿದೆ. ಇದಲ್ಲದೆ, ಸ್ಥಿರ ನೆಟ್‌ವರ್ಕ್‌ಗಾಗಿ ಹೆಣಗಾಡುತ್ತಿರುವ ಎಲ್ಲಾ ದೂರದ ಪ್ರದೇಶಗಳಿಗೆ ಈ ಇಂಟರ್ನೆಟ್ ಸೇವೆ ತಲುಪಲಿದ್ದು, ಹಳ್ಳಿಗಾಡು ಪ್ರದೇಶಗಳ ಜನರಿಗೆ ವೇಗದಲ್ಲಿ ನೆಟ್ವರ್ಕ್ ಪೂರೈಕೆ ಮಾಡಲಿದೆ ಎಂದು ಹೇಳಲಾಗಿದೆ.
ಸ್ಟಾರ್‌ಲಿಂಕ್ ಇಂಡಿಯಾ ಉಡಾವಣಾ ದಿನಾಂಕದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ವಿಶೇಷವಾಗಿ, ದೇಶದಲ್ಲಿ ಎಷ್ಟು ಉಪಗ್ರಹ ಇಂಟರ್ನೆಟ್ ಸಂಪರ್ಕಗಳು ಇರಬೇಕು? ಅದು ಯಾವಾಗ ಲಭ್ಯವಿರುತ್ತದೆ? ಇಂಟರ್ನೆಟ್ ಸೇವೆಯ ವೇಗ ಎಷ್ಟು? ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯೋಣ ಬನ್ನಿ.
ಈ ವರ್ಷದ ಅಂತ್ಯದ ವೇಳೆಗೆ ಲಭ್ಯ?
ಈಗ, ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯು ಭಾರತ ಸರ್ಕಾರದಿಂದ ಬಹುತೇಕ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡಿದೆ ಎಂದೇ ಹೇಳಲಾಗಿದೆ. ಮುಖ್ಯ ವಿಷಯವೆಂದರೆ, ಈ ಸೇವೆಯು ಈಗಾಗಲೇ ಮಹಾರಾಷ್ಟ್ರ ಸರ್ಕಾರದಿಂದ ಪಾಲುದಾರಿಕೆ ಒಪ್ಪಂದವನ್ನು ಪಡೆದುಕೊಂಡಿದೆ. ಆದಾಗ್ಯೂ, ಪ್ರಸ್ತುತ, ಕೆಲವು ಅನುಮೋದನೆಗಳು ಮತ್ತು ಸ್ಪೆಕ್ಟ್ರಮ್ ಹಂಚಿಕೆಗಳು ಇನ್ನೂ ಬಾಕಿ ಉಳಿದಿವೆ. ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ಅನುಮೋದನೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು 2026ರ ಮೊದಲ ತ್ರೈಮಾಸಿಕದ ವೇಳೆಗೆ ದೇಶದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಸ್ಟಾರ್‌ಲಿಂಕ್ ಯೋಜನೆಯ ಬೆಲೆ ಎಷ್ಟು?
ಸ್ಟಾರ್‌ಲಿಂಕ್ ಮೂಲ ಯೋಜನೆಯು ಸುಮಾರು 25Mbps ವೇಗವನ್ನು ನೀಡುತ್ತದೆ ಎನ್ನಲಾಗಿದೆ. ಹೈ-ಸ್ಪೀಡ್ ಯೋಜನೆಯು 225Mbps ವೇಗದಲ್ಲಿ ಲಭ್ಯವಿರಬಹುದು. ಇನ್ನು ಬೆಲೆಯ ವಿಷಯಕ್ಕೆ ಬಂದರೆ, ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯು 3,300 ರೂ.ದಿಂದ ಪ್ರಾರಂಭವಾಗಲಿದ್ದು, 6,000 ರೂ. ವರೆಗೆ ತಲುಪಬಹುದು. ಹೆಚ್ಚಿನ ಹೈ-ಸ್ಪೀಡ್ ಕನೆಕ್ಷನ್ಗೆ ಸುಮಾರು 30,000 ರೂ. ತಗುಲಲಿದ್ದು, ಅದು ಒನ್ ಟೈಮ್ ಪೇಮೆಂಟ್ ಇರಬಹುದು,(ಏಜೆನ್ಸೀಸ್).