ಪ್ರಧಾನಿ ಮೋದಿ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್
ಚೆನ್ನೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಸಂಸ್ಕೃತವನ್ನು(Sanskrit) ಸತ್ತ ಭಾಷೆ ಎಂದು ಕರೆದಿದ್ದಾರೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ನಮ್ಮ ನಂಬಿಕೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಉದಯನಿಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ, ಕೇಂದ್ರ ಸರ್ಕಾರವು ಸಂಸ್ಕೃತವನ್ನು ಉತ್ತೇಜಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ತಮಿಳನ್ನು ಕಡೆಗಣಿಸುತ್ತಿದೆ ಎಂದು ಉದಯನಿಧಿ ಆರೋಪಿಸಿದ್ದಾರೆ. ಪ್ರಧಾನಿಯನ್ನು ತೀಕ್ಷ್ಣವಾಗಿ ಪ್ರಶ್ನೆಸಿದ ತಮಿಳುನಾಡಿನ ಡಿಸಿಎಂ, ನೀವು ತಮಿಳು ಕಲಿಯಲು ಉತ್ಸುಕರಾಗಿದ್ದರೆ, ನೀವು ಮಕ್ಕಳನ್ನು ಹಿಂದಿ ಮತ್ತು ಸಂಸ್ಕೃತವನ್ನು ಏಕೆ ಕಲಿಯುವಂತೆ ಮಾಡುತ್ತಿದ್ದೀರಿ?" ಎಂದು ಕೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸಂಸ್ಕೃತಕ್ಕೆ ₹2400 ಕೋಟಿ ಮೀಸಲಿಟ್ಟಿದೆ. ಆದರೆ ತಮಿಳಿಗೆ ಕೇವಲ ₹150 ಕೋಟಿ ನೀಡಿದೆ ಎಂದು ಕಿಡಿಕಾರಿದ್ದಾರೆ.
ಉದಯನಿಧಿ ವಿರುದ್ಧ ಬಿಜೆಪಿ ವಾಗ್ದಾಳಿ
ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ತಮಿಳು ಸಂಸ್ಕೃತಿಯು ಇತರ ಭಾಷೆಗಳನ್ನು ಕೀಳಾಗಿ ಕಾಣುವಂತೆ ಹೇಳುವುದಿಲ್ಲ. ನಾವು ನಮ್ಮ ಸ್ವಂತ ಭಾಷೆಯನ್ನು ಗೌರವಿಸಬಹುದು. ಆದರೆ ತಮಿಳು ಕೂಡ ಇತರ ಭಾಷೆಗಳನ್ನು ಕೀಳಾಗಿ ಕಾಣಲು ಬಿಡುವುದಿಲ್ಲ ಎಂದಿದ್ದಾರೆ. ನೀವು ಒಂದು ಭಾಷೆಯನ್ನು ಮೆಚ್ಚಿದರೆ, ನೀವು ಇನ್ನೊಂದು ಮಾತೃಭಾಷೆಯನ್ನು ಕೀಳಾಗಿ ಕಾಣುತ್ತಿದ್ದೀರಿ ಎಂದರ್ಥವಲ್ಲ ಎಂದು ಉದಯನಿಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಮುಂದುವರೆದು ಮಾತನಾಡಿರುವ ಬಿಜೆಪಿ ನಾಯಕಿ, ಉದಯನಿಧಿ ಹೇಳಿಕೆಗಳು, ತೀವ್ರ ಖಂಡನೀಯವಾಗಿದೆ. ಈ ಹಿಂದೆ ಸನಾತನ ಧರ್ಮವನ್ನು ಅವಮಾನಿಸಿದ್ದರು ಮತ್ತು ಈಗ ನಮ್ಮ ಎಲ್ಲಾ ಪ್ರಾರ್ಥನೆಗಳಲ್ಲಿ ಬಳಸಲಾಗುವ ಭಾಷೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಅಲ್ಲದೆ, ಉಪಮುಖ್ಯಮಂತ್ರಿಗಳು ತಮ್ಮ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸೌಂದರರಾಜನ್ ಒತ್ತಾಯಿಸಿದ್ದಾರೆ. ನನ್ನ ಮಾತೃಭಾಷೆ ತಮಿಳು ವಿಶಾಲ ಮನಸ್ಸಿನದ್ದು ಮತ್ತು ಇತರ ಭಾಷೆಗಳನ್ನು ಮಾತನಾಡುವ ಜನರಿಂದ ಪ್ರಶಂಸಿಸಲ್ಪಟ್ಟಿದೆ. ಇವರು ತಮ್ಮ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದಿದ್ದಾರೆ,(ಏಜೆನ್ಸೀಸ್).