Matrize Survey | ದ್ರಾವಿಡ ನಾಡಲ್ಲಿ ಸದ್ದು ಮಾಡ್ತಿದೆ ಕೇಸರಿ ಮೈತ್ರಿ 
ದೇಶ

ದ್ರಾವಿಡ ನಾಡಲ್ಲಿ ಸದ್ದು ಮಾಡ್ತಿದೆ ಕೇಸರಿ ಮೈತ್ರಿ.. ಸ್ಟಾಲಿನ್ ಕನಸಿಗೆ ಈ ವ್ಯಕ್ತಿಯೇ ಅಡ್ಡಗಾಲು!; ಶಾಕಿಂಗ್​ ಭವಿಷ್ಯ ನುಡಿದ ಸಮೀಕ್ಷೆ | Matrize Survey

Matrize Survey: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿದ್ದು, ಈ ನಡುವೆ ಮ್ಯಾಟ್ರಿಜ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಡಿಎಂಕೆ ನೇತೃತ್ವದ ಇಂಡಿಯಾ ಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ ಎಂದು  ಭವಿಷ್ಯ ನುಡಿದಿದೆ.
ಅಚ್ಚರಿ ಎಂಬಂತೆ ಈ ಬಾರಿ ಎನ್‌ಡಿಎ ಮೈತ್ರಿಕೂಟಕ್ಕೆ ಅಲ್ಪ ಮುನ್ನಡೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ನಟ ವಿಜಯ್ ನೇತೃತ್ವದ ಟಿವಿಕೆ ಕೂಡ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮ್ಯಾಟ್ರಿಜ್ ಸೋಮವಾರ ಬಿಡುಗಡೆ ಮಾಡಿರುವ ಇತ್ತೀಚಿನ ಓಪಿನಿಯನ್​ ಪೋಲ್​ ದತ್ತಾಂಶವು ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭಾರಿ ರಾಜಕೀಯ ಪಲ್ಲಟವಾಗುವ ಮುನ್ಸೂಚನೆ ನೀಡಿದ್ದು, ಈ ಸಮೀಕ್ಷೆಯ ಪ್ರಕಾರ, ರಾಜ್ಯದ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಇಂಡಿಯಾ ಬಣ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ನೇರ ಮತ್ತು ತೀವ್ರ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬಾರಿ ಎನ್‌ಡಿಎ ಮೈತ್ರಿಕೂಟವು ಸ್ವಲ್ಪ ಮುನ್ನಡೆ ಸಾಧಿಸುವ ನಿರೀಕ್ಷೆಯಿದ್ದು, 107 ರಿಂದ 120 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಸಮೀಪಕ್ಕೆ ಬರಬಹುದು ಎಂದು ಭವಿಷ್ಯ ನುಡಿಯಲಾಗಿದೆ. ಮತ್ತೊಂದೆಡೆ, ಪ್ರಬಲ ಪೈಪೋಟಿ ನೀಡಲಿರುವ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಸುಮಾರು 102 ರಿಂದ 115 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) 5 ರಿಂದ 12 ಸ್ಥಾನಗಳನ್ನು ಪಡೆಯುವ ಮೂಲಕ ಉತ್ತಮ ಆರಂಭ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಮತ ಹಂಚಿಕೆ ಲೆಕ್ಕಾಚಾರ

ಮತ ಹಂಚಿಕೆಯ ವಿಚಾರದಲ್ಲಿಯೂ ಎನ್‌ಡಿಎ ಶೇ. 40 ರಷ್ಟು ಮತಗಳನ್ನು ಪಡೆಯುವ ಮೂಲಕ ಮುಂಚೂಣಿಯಲ್ಲಿರಲಿದ್ದು, ಡಿಎಂಕೆ ಮೈತ್ರಿಕೂಟ ಶೇ. 38 ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ. ಹೊಸ ಪಕ್ಷ ಟಿವಿಕೆ ಶೇ. 16 ರಷ್ಟು ಮತಗಳನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರಾದೇಶಿಕವಾಗಿ ಹೇಳುವುದಾದರೆ ದಕ್ಷಿಣ ತಮಿಳುನಾಡಿನಲ್ಲಿ ಎನ್‌ಡಿಎ 24-26 ಸ್ಥಾನಗಳನ್ನು ಹಾಗೂ ಡಿಎಂಕೆ+ 22-24 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. 
47 ಸ್ಥಾನಗಳಿರುವ ಕಾವೇರಿ ಡೆಲ್ಟಾ ಪ್ರದೇಶದಲ್ಲಿಯೂ ಎನ್‌ಡಿಎ 22-25 ಸ್ಥಾನಗಳೊಂದಿಗೆ ಮೇಲುಗೈ ಸಾಧಿಸಬಹುದು. ಆದರೆ, ಚೆನ್ನೈ ಪ್ರದೇಶದಲ್ಲಿ ಮಾತ್ರ ಡಿಎಂಕೆ ಮೈತ್ರಿಕೂಟವು 16-19 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವ ಲಕ್ಷಣಗಳಿವೆ. ಇಲ್ಲಿ ಟಿವಿಕೆ ಕೂಡ 4-7 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಭಾವ ಬೀರಲಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಎಐಎಡಿಎಂಕೆ, ಬಿಜೆಪಿ, ಪಿಎಂಕೆ, ಎಎಂಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಒಂದಾಗಿವೆ. ಇದಕ್ಕೆ ಪ್ರತಿಯಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್, ವಿಸಿಕೆ, ಕಮ್ಯುನಿಸ್ಟ್ ಪಕ್ಷಗಳು ಹಾಗೂ ಐಯುಎಂಎಲ್ ಭದ್ರವಾಗಿ ನೆಲೆಯೂರಿವೆ.

ಕಳೆದ ಚುನಾವಣೆಗಳ ಫಲಿತಾಂಶ ಹೀಗಿದೆ

2021ರ ಚುನಾವಣೆಯಲ್ಲಿ ಡಿಎಂಕೆ 133 ಸ್ಥಾನಗಳನ್ನು ಗೆದ್ದು ಎಐಎಡಿಎಂಕೆಯ ಆಡಳಿತಕ್ಕೆ ಬ್ರೇಕ್​ ಹಾಕಿತ್ತು, ಎಐಎಡಿಎಂಕೆ 66 ಸ್ಥಾನಗಳಿಗೆ ಕುಸಿದಿತ್ತು. ಅದೇ ರೀತಿ 2016ರಲ್ಲಿ ನಡೆದ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ 134 ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಈಗಿನ ಮ್ಯಾಟ್ರಿಜ್ ಸಮೀಕ್ಷೆಯು ರಾಜ್ಯದಲ್ಲಿ ಮತ್ತೊಮ್ಮೆ ಆಡಳಿತ ವಿರೋಧಿ ಅಲೆ ಇರುವುದನ್ನು ಸ್ಪಷ್ಟಪಡಿಸಿದೆ. ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).