MK Stalin | ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ಚೆನ್ನೈ: ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅನುಭವಿಸಿದ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಗುರುವಾರ ಘೋಷಿಸಿದ್ದಾರೆ. ಚುನಾವಣಾ ಸೋಲಿಗೆ ಕಾರಣವಾದ ಅಂಶಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡಲು ಸಮಿತಿಯೊಂದನ್ನು ರಚಿಸಲಾಗುವುದು ಮತ್ತು ಈ ಸಮಿತಿಯು 20 ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದೆ ಎಂದು ಸ್ಟಾಲಿನ್ ತಿಳಿಸಿದರು.
ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಮಾತನಾಡಿದ ಸ್ಟಾಲಿನ್, ಚುನಾವಣಾ ಫಲಿತಾಂಶದ ಬಳಿಕ ಎಐಎಡಿಎಂಕೆ ತನ್ನ ಶಾಸಕರನ್ನು ಪುದುಚೇರಿಯ ರೆಸಾರ್ಟ್‌ನಲ್ಲಿ ಇರಿಸಿದ್ದ ಕ್ರಮವನ್ನು ಖಂಡಿಸುತ್ತಾ, ಪಕ್ಷ ಸೋಲನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಹೊಂದಿದೆ ಎಂದರು. ಮೇ 4 ರ ಫಲಿತಾಂಶದ ನಂತರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ (118 ಸ್ಥಾನಗಳು) ಸಿಗದ ಕಾರಣ ಎಐಎಡಿಎಂಕೆ ರೆಸಾರ್ಟ್ ಸಂಸ್ಕೃತಿಗೆ ಮೊರೆ ಹೋಗಿತ್ತು ಎಂದು ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸಮ್ಮಿಶ್ರ ಸರ್ಕಾರದ ಕುರಿತು ಹೇಳಿದ್ದೇನು..?
ಪ್ರಸ್ತುತ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳು ವೆಟ್ರಿ ಕಳಗಂ (TVK) ಸರ್ಕಾರವು ಎಡಪಕ್ಷಗಳು, ವಿಸಿಕೆ ಮತ್ತು ಐಯುಎಂಎಲ್‌ನಂತಹ ಮಿತ್ರಪಕ್ಷಗಳ ಬೆಂಬಲದಿಂದ ಅಧಿಕಾರದಲ್ಲಿದೆ ಎಂದರು. ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನಗಳನ್ನು ಗೆದ್ದಿದ್ದು, ಮಿತ್ರಪಕ್ಷಗಳ ಸ್ಥಾನಗಳನ್ನು ಸೇರಿಸಿದರೆ ಈ ಸಂಖ್ಯೆ 73ಕ್ಕೆ ಏರುತ್ತದೆ ಎಂದು ತಿಳಿಸಿದರು.
ಕಳೆದ ಐದು ವರ್ಷಗಳಿಂದ ಜನರ ಕಲ್ಯಾಣಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರೂ ಅಧಿಕಾರಕ್ಕೆ ಮರಳಲು ಸಾಧ್ಯವಾಗದಿರುವುದಕ್ಕೆ ತಾವು ಯಾರನ್ನೂ ದೂಷಿಸುವುದಿಲ್ಲ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದರು. ಪಕ್ಷದ ನಾಯಕನಾಗಿ ಗೆಲುವಿನ ಬಗ್ಗೆ ಹೆಮ್ಮೆ ಪಡಬಹುದಾದಾಗ, ವೈಫಲ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನಸಭೆಯಲ್ಲಿ ಟಿವಿಕೆ ಸರ್ಕಾರವು 144 ಮತಗಳೊಂದಿಗೆ ಬಹುಮತ ಸಾಬೀತುಪಡಿಸಿರುವುದನ್ನು ಉಲ್ಲೇಖಿಸಿದ ಸ್ಟಾಲಿನ್, ವಿಶ್ವಾಸಮತ ಯಾಚನೆಯ ವೇಳೆ ಎಐಎಡಿಎಂಕೆಯ 25 ಶಾಸಕರು ಸರ್ಕಾರದ ಪರವಾಗಿ ಮತ ಚಲಾಯಿಸಿರುವುದನ್ನು ಗಮನಿಸಿದರೆ ಮುಂದಿನ ರಾಜಕೀಯ ಪರಿಸ್ಥಿತಿಯನ್ನು ಊಹಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಡಿಎಂಕೆ ಶಾಸಕರು ವಿಧಾನಸಭೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು(ಏಜೆನ್ಸೀಸ್).