K Palaniswami | ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ 
ದೇಶ

ಡಿಎಂಕೆ ಭಾರತದ ಕೆಟ್ಟ ಸರ್ಕಾರ...ಮುಂಬರುವ ಚುನಾವಣೆಯಲ್ಲಿ ಎನ್​ಡಿಎ 210 ಸ್ಥಾನ ಗೆಲ್ಲುತ್ತದೆ ಅಂದ್ರು ಪಳನಿಸ್ವಾಮಿ | K Palaniswami

ಚೆನ್ನೈ: ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಆಡಳಿತವನ್ನು ಭಾರತದ ಅತ್ಯಂತ ಕೆಟ್ಟ ಸರ್ಕಾರ ಎಂದು ಕರೆದಿರುವ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಟುಡೇ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಳನಿಸ್ವಾಮಿ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಸುಮಾರು 210 ಕ್ಷೇತ್ರಗಳಲ್ಲಿ ಸಾಧಿಸುತ್ತದೆ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದ್ದು, ಈ ಸರ್ಕಾರದಿಂದ ವರ್ತನೆಯಿಂದ ಜನರು ತುಂಬಾ ಅಸಮಾಧಾನಗೊಂಡಿದ್ದಾರೆ, ಆದ್ದರಿಂದ ಆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಡಿಎಂಕೆಯ ಪೊಂಗಲ್ ಗಿಫ್ಟ್​

ಡಿಎಂಕೆ ಸರ್ಕಾರ 3,000 ರೂ. ಪೊಂಗಲ್ ಉಡುಗೊರೆಯನ್ನು ಘೋಷಿಸಿರುವುದನ್ನು ಗುರಿಯಾಗಿಸಿಕೊಂಡಿರುವ ಪಳನಿಸ್ವಾಮಿ, ಇದು ಚುನಾವಣಾ ತಂತ್ರ, ಇಷ್ಟು ವರ್ಷಗಳಿಂದ ನೀಡದೆ ಈಗ ಮತಗಳಿಗಾಗಿ ಗಿಫ್ಟ್​ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಮಹಿಳೆಯರು ಸುರಕ್ಷಿತವಾಗಿಲ್ಲ

ಆಡಳಿತ ಪಕ್ಷದವರ ದ್ರಾವಿಡ ಮಾದರಿ ಹೇಳಿಕೆಗಳನ್ನು ತಳ್ಳಿಹಾಕಿದ ಪಳನಿಸ್ವಾಮಿ, ದ್ರಾವಿಡ ಮಾದರಿ ಏನು? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಮಹಿಳೆಯರು ಸುರಕ್ಷಿತವಾಗಿಲ್ಲ, ಅಪರಾಧ ಕೃತ್ಯ ಹೆಚ್ಚುತ್ತಿದ್ದರು ಶಾಶ್ವತ ಪೊಲೀಸ್ ಮಹಾನಿರ್ದೇಶಕರನ್ನು ಸಹ ನೇಮಿಸಲಾಗಿಲ್ಲ, ಡಿಜಿಪಿ ನೇಮಕವಾದರೆ ಮಾತ್ರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರದ ಆರೋಪ

ಡಿಎಂಕೆ ಸರ್ಕಾರದ ಅಡಿಯಲ್ಲಿ ಎಲ್ಲಾ ವಲಯಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂ."ಮೌಲ್ಯದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಎಐಎಡಿಎಂಕೆ ರಾಜ್ಯಪಾಲರನ್ನು ಸಂಪರ್ಕಿಸಿದೆ, ಮದ್ಯ ನಿಗಮಕ್ಕೆ ಸಂಬಂಧಿಸಿದ ತನಿಖೆಗಳನ್ನು ಸಹ ಉಲ್ಲೇಖಿಸಿದರು.
ಇಲಾಖೆವಾರು ಇಷ್ಟೊಂದು ದೊಡ್ಡ ಭ್ರಷ್ಟಾಚಾರ ಮಾಡಿರುವ ಏಕೈಕ ಸರ್ಕಾರವೆಂದರೆ ದ್ರಾವಿಡ ಮಾದರಿ ಸರ್ಕಾರ, ಇದರಿಂದ ಆತಂಕಗೊಂಡಿರುವ ಆಡಳಿತ ಪಕ್ಷ ಭಯಪಡುವ ಮೂಲಕ ತನಿಖೆಗಳನ್ನು ಸ್ಥಗಿತಗೊಳಿಸಲು ನ್ಯಾಯಾಲಯಗಳಿಗೆ ಧಾವಿಸುತ್ತದೆ ಎಂದು ಆರೋಪಿಸಿದರು.

ಬಿಜೆಪಿ ಜೊತೆ ಮೈತ್ರಿ

ಡಿಎಂಕೆಯವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಪರವಾಗಿಲ್ಲ, ಆದರೆ ನಾವು ಹಾಗೆ ಮಾಡಿದಾಗ ಅದು ತಪ್ಪಾಗಿ ಕಾಣುತ್ತದೆ, ಸದ್ಯ ಈ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುವುದೇ ನಮ್ಮ ಆದ್ಯತೆಯಾಗಿದೆ. ಚುನಾವಣೆಯಲ್ಲಿ ಟಿವಿಕೆ ಸೇರಿದಂತೆ ಯಾವುದೇ ರೀತಿಯ ತ್ರಿಕೋನ ಸ್ಪರ್ಧೆ ಇಲ್ಲ, ಇದು ಕೇವಲ ಮಾಧ್ಯಮಗಳ ಸೃಷ್ಟಿ, ಈಗ ಸ್ಪರ್ಧೆ ಇರುವುದು ಎಐಎಡಿಎಂಕೆ ಮತ್ತು ಡಿಎಂಕೆ ಮಾತ್ರ ಎಂದರು.

ಅಮ್ಮನ ಪರಂಪರೆ ಜೀವಂತವಾಗಿದೆ

ಎಐಎಡಿಎಂಕೆ ಸಂಸ್ಥಾಪಕಿ ಜೆ ಜಯಲಲಿತಾರನ್ನು ನೆನೆದು ಪಳನಿಸ್ವಾಮಿ, ಅವರ ಧ್ವನಿ, ಅವರ ಪರಂಪರೆ ನನ್ನ ರಕ್ತದಲ್ಲಿ ಹರಿಯುತ್ತದೆ, ಯಾವಾಗಲೂ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ ಎಂದು ಹೇಳಿದರು(ಏಜೆನ್ಸೀಸ್​).