CM Vijay | ವಿಜಯ್ ಸರ್ಕಾರದ ಮೇಲೆ ಸ್ಟಾಲಿನ್ ಕಣ್ಣು
CM Vijay: ನೀವು ಸರ್ಕಾರವನ್ನು ಬದಲಾಯಿಸಲು ಬಯಸಿದರೆ, ನಾಯಕನನ್ನು ಹುಡುಕಬೇಡಿ. ನೀವೆ ನಾಯಕನಾಗಿ ಎಂದು ನಟ ವಿಜಯ್ ತಮ್ಮ ಸರ್ಕಾರ್ ಚಿತ್ರದಲ್ಲಿ ಹೇಳಿದ್ದರು. ಈಗ ಎಂಟು ವರ್ಷಗಳ ಬಳಿಕ, ವಿಜಯ್ ಅಂತಿಮವಾಗಿ ತಮಿಳುನಾಡಿನ ನಾಯಕರಾಗಿ ಹೊರಹೊಮ್ಮಿದ್ದಾರೆ ಮತ್ತು ತಮ್ಮ ಸರ್ಕಾರವನ್ನು ರಚಿಸಿದ್ದಾರೆ.
ಆದರೆ ಈಗ ಈ ಅಧಿಕಾರ ಸ್ವೀಕಾರದ ಹಿಂದೆ ದೊಡ್ಡದೊಂದು ರಾಜಕೀಯ ಅನಿವಾರ್ಯತೆ ಅಡಗಿದ್ದು, ವಿಜಯ್ ತಮ್ಮ ರಾಜಕೀಯ ಶತ್ರು ಎಂದು ಹಣೆಪಟ್ಟಿ ಕಟ್ಟಿದ್ದ ಡಿಎಂಕೆಯ ಮಿತ್ರಪಕ್ಷಗಳ ಬೆಂಬಲವನ್ನು ಅವಲಂಬಿಸಬೇಕಾಯಿತು. ತಮಿಳುನಾಡು ವಿಧಾನಸಭೆಯಲ್ಲಿ ಇಷ್ಟು ಕಡಿಮೆ ಸಂಖ್ಯಾಬಲದ ಸರ್ಕಾರವನ್ನು ಉಳಿಸಿಕೊಳ್ಳಲು ವಿಜಯ್ ಸ್ಟಾಲಿನ್ರ ಪರೋಕ್ಷ ಬೆಂಬಲ ಪಡೆಯಲೇಬೇಕಾಗಿದೆ.
ಆದರೆ ಈ ನಡುವೆ ವಿಜಯ್‌ಗೆ ಒಂದು ಸಮಾಧಾನದ ಸಂಗತಿಯೆಂದರೆ, ಟಿವಿಕೆಗೆ ಎಐಎಡಿಎಂಕೆಯ ಒಂದು ಬಣ ಬೆಂಬಲ ನೀಡಿದ ನಂತರ ಆ ಪಕ್ಷದಲ್ಲಿ ಉಂಟಾಗಿರುವ ಗೊಣಗಾಟಗಳು ಹೊಸ ಭರವಸೆ ನೀಡಿವೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ವಿಜಯ್ ನೇತೃತ್ವದ ಸರ್ಕಾರ ಐದು ವರ್ಷಗಳ ಕಾಲ ಸ್ಥಿರವಾಗಿರಲು ಸಾಧ್ಯವೇ..? ಅದಕ್ಕೆ ಉತ್ತರ ಅಲ್ಪ ಕೆಳಗಿದೆ.
ಅವರೆಲ್ಲಾ ಸ್ಟಾಲಿನ್ ಮಿತ್ರರು...
ವಿಜಯ್ ನೇತೃತ್ವದ ಟಿವಿಕೆ ಈಗ ವಿಧಾನಸಭೆಯಲ್ಲಿ 120 ಶಾಸಕರ ಬೆಂಬಲವನ್ನು ಹೊಂದಿದ್ದು, 107 ಶಾಸಕರನ್ನು ಹೊಂದಿರುವ ಟಿವಿಕೆ, ಕಾಂಗ್ರೆಸ್‌ನ 5 ಶಾಸಕರು, ವಿಸಿಕೆಯ 2, ಐಯುಎಂಎಲ್‌ನ 2 ಮತ್ತು ಎಡಪಂಥೀಯರ 4 ಶಾಸಕರ ಊರುಗೋಲುಗಳನ್ನು ಅವಲಂಬಿಸಿದೆ. ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ಕಾಂಗ್ರೆಸ್ ಹೊರತುಪಡಿಸಿ, ಉಳಿದ ಪಕ್ಷಗಳು ಇನ್ನೂ ಸ್ಟಾಲಿನ್ಗೆ ನಿಷ್ಠರಾಗಿವೆ ಎನ್ನಲಾಗಿದ್ದು, ವಿಸಿಕೆ, ಐಯುಎಂಎಲ್ ಮತ್ತು ಎಡಪಕ್ಷಗಳು ಟಿವಿಕೆಗೆ ಕೇವಲ ಬಾಹ್ಯ ಬೆಂಬಲವನ್ನು ನೀಡಿವೆ.
ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಮಾಜಿ ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಎಡಪಕ್ಷಗಳು ಈಗಾಗಲೇ ಹೇಳಿವೆ. ಅಂದರೆ, ವಿಜಯ್ರ ಟಿವಿಕೆ ನಿಜವಾಗಿಯೂ ನಂಬಬಹುದಾದ ಬೆಂಬಲವೆಂದರೆ ಅದು ಕೇವಲ ಐವರು ಕಾಂಗ್ರೆಸ್ ಶಾಸಕರು ಮಾತ್ರ. ಆಗ ಸರ್ಕಾರದ ಸಂಖ್ಯಾಬಲ 112 ಮಾತ್ರ. ವಿಸಿಕೆ, ಐಯುಎಂಎಲ್ ಮತ್ತು ಎಡಪಕ್ಷಗಳು ಡಿಎಂಕೆಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲವಾದ್ದರಿಂದ, ಸ್ಥಿರ ಸರ್ಕಾರಕ್ಕೆ ಸ್ಟಾಲಿನ್ ಅವರೇ ಪ್ರಮುಖರು ಎಂಬ ವಾದಕ್ಕೆ ಪುಷ್ಟಿ ಸಿಕ್ಕಿದೆ.
ರಾಜಕೀಯ ವಿಶ್ಲೇಷಕ ಅರವಿಂದ್ ಪಿ ಟ್ವೀಟ್ ಪ್ರಕಾರ ಸದ್ಯಕ್ಕೆ ಸ್ಟಾಲಿನ್ ಪರೋಕ್ಷವಾಗಿ ಚಾಲಕನ ಸ್ಥಾನದಲ್ಲಿದ್ದಾರೆ, ಏಕೆಂದರೆ ವಿಜಯ್ ನೇತೃತ್ವದ ಟಿವಿಕೆಯನ್ನು ಬೆಂಬಲಿಸುವ ಪ್ರತಿಯೊಂದು ಪಕ್ಷವು ಅವರ ಹಿಂದಿನ ಮಿತ್ರಪಕ್ಷಗಳನ್ನು ಒಳಗೊಂಡಿದೆ. ಈ ನೂತನ ಸರ್ಕಾರದ ರಿಮೋಟ್ ಕಂಟ್ರೋಲ್ ಸ್ಟಾಲಿನ್ ಬಳಿ ಇದ್ದು, ಯಾವಾಗ ಸರಿಯಾದ ಬಟನ್ ಒತ್ತಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಇತ್ತ ವಿಜಯ್ ರಾಜಕೀಯಕ್ಕೆ ಹೊಸಬರಾಗಿರಬಹುದು, ಆದರೆ ಹಗ್ಗದ ಮೇಲೆ ನಡೆಯಬೇಕು ಎಂಬುದರ ಅರಿವು ಅವರಿಗಿದೆ.
ಎಚ್ಚರಿಕೆ ಹೆಜ್ಜೆಯನ್ನಿಡುತ್ತಿರುವ ವಿಜಯ್..
ಈ ಕಾರಣದಿಂದಾಗಿಯೇ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ಸೋಮವಾರ ವಿಜಯ್ ಸ್ಟಾಲಿನ್ ನಿವಾಸಕ್ಕೆ ಮೊದಲ ಭೇಟಿ ನೀಡಿದ್ದೇ ಇದಕ್ಕೆ ಸಾಕ್ಷಿ. ತಮಿಳುನಾಡಿನ ಇತಿಹಾಸದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನಿಕಟಪೂರ್ವ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಮೊದಲ ಘಟನೆ ಇದಾಗಿದೆ. ಈ ನಡೆಯನ್ನು ವಿಜಯ್ ರಾಜಕೀಯ ಪ್ರಬುದ್ಧತೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪತ್ರಕರ್ತರೊಬ್ಬರು ಟ್ವೀಟ್ ಮಾಡಿದಂತೆ, ವಿಜಯ್ ಅವರ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದು ಅವರ ಬೆಂಬಲಿಗರಲ್ಲ ಅಥವಾ ಮೈತ್ರಿಕೂಟದ ಲೆಕ್ಕಾಚಾರವಲ್ಲ, ಬದಲಾಗಿ ಸ್ಟಾಲಿನ್ ಲೆಕ್ಕಾಚಾರದ ಸಂಯಮ. ಸದ್ಯಕ್ಕೆ ಸ್ಟಾಲಿನ್ ವಿಜಯ್ ಅವರ ಪ್ರತಿಯೊಂದು ನಡೆಯನ್ನೂ ಗಮನಿಸಲಿದ್ದಾರೆ. ವಿಜಯ್ ಮಹಿಳಾ ಸುರಕ್ಷತೆ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುವ ಬಗ್ಗೆ ದೊಡ್ಡ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ತಮಿಳುನಾಡಿನ ರೂ. 10 ಲಕ್ಷ ಕೋಟಿ ಸಾಲದ ಹೊರೆಯ ಬಗ್ಗೆ ಹಿಂದಿನ ಡಿಎಂಕೆ ಆಡಳಿತದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಸ್ಟಾಲಿನ್ ಒಬ್ಬ ಚತುರ ರಾಜಕಾರಣಿಯಾಗಿದ್ದು, ವಿಜಯ್ರನ್ನು ಸರ್ಕಾರ ರಚಿಸಲು ಬಿಡದಿದ್ದರೆ ಪರಿಸ್ಥಿತಿ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತಿತ್ತು ಎನ್ನುವುದು ಅವರಿಗೆ ತಿಳಿದಿತ್ತು. ಬಹುಶಃ ಇದೇ ಕಾರಣಕ್ಕೆ ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುವ ಬಗ್ಗೆ ಚರ್ಚೆಗಳು ನಡೆದರೂ ಅದು ಕಾರ್ಯಗತವಾಗಲಿಲ್ಲ. ಅಂತಹ ಮೈತ್ರಿ ವಿಜಯ್ ಬಗ್ಗೆ ಸಹಾನುಭೂತಿಯ ಅಲೆಯನ್ನು ಸೃಷ್ಟಿಸಿ ಅವರ ಕೈಯನ್ನು ಮತ್ತಷ್ಟು ಬಲಪಡಿಸುತ್ತಿತ್ತು. ಅಲ್ಲದೆ, ಚುನಾವಣೆಯಲ್ಲಿ ಕಳಪೆ ಫಲಿತಾಂಶದ ನಂತರ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರ ಪ್ರಭಾವ ಕುಸಿಯುತ್ತಿದ್ದು, ಎಐಎಡಿಎಂಕೆ ಪತನಗೊಳ್ಳುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವುದು ಸ್ಟಾಲಿನ್ ಲೆಕ್ಕಾಚಾರ.
ಎಐಎಡಿಎಂಕೆ ಬಿಕ್ಕಟ್ಟು, ವಿಜಯ್‌ಗೆ ಫ್ಲಸ್ ಪಾಯಿಂಟ್..
ಎಐಎಡಿಎಂಕೆ ಬಿಕ್ಕಟ್ಟು ವಿಜಯ್‌ಗೆ ಉತ್ತಮ ಬ್ಯಾಕಪ್ ಪ್ಲಾನ್ ನೀಡಿದೆ. ಎರಡು ದಿನಗಳಿಂದ ನಡೆಯುತ್ತಿರುವ ಚರ್ಚೆಗಳ ಬಳಿಕ ಮಂಗಳವಾರ ಹಿರಿಯ ಶಾಸಕರಾದ ಎಸ್‌ಪಿ ವೇಲುಮಣಿ ಮತ್ತು ಸಿ.ವಿ. ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಬಣವು ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿತು. ಇಪಿಎಸ್ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದೇ ಇದಕ್ಕೆ ಪ್ರಚೋದನೆ ಎಂದು ಷಣ್ಮುಗಂ ಹೇಳಿದ್ದಾರೆ. 47 ಎಐಎಡಿಎಂಕೆ ಶಾಸಕರಲ್ಲಿ ಸುಮಾರು 30 ಮಂದಿ ಇಪಿಎಸ್ ವಿರೋಧಿ ಬಣದೊಂದಿಗೆ ಗುರುತಿಸಿಕೊಂಡಿದ್ದು, ವಿಜಯ್ ಮುಖ್ಯಮಂತ್ರಿಯಾಗಬೇಕೆಂಬುದು ಜನಾದೇಶ, ನಾವು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಷಣ್ಮುಗಂ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಪಕ್ಷಾಂತರ ನಿಷೇಧ ಕಾನೂನಿನಡಿ ಅನರ್ಹತೆಯನ್ನು ತಪ್ಪಿಸಲು ಈ ಬಣಕ್ಕೆ ಕನಿಷ್ಠ 32 ಶಾಸಕರ ಬೆಂಬಲ ಬೇಕಿದ್ದು, ಬುಧವಾರದ ವಿಶ್ವಾಸಮತ ಪರೀಕ್ಷೆಯಲ್ಲಿ ನಿಖರ ಸಂಖ್ಯೆ ತಿಳಿಯಲಿದೆ.
ಡಿಎಂಕೆ ಮಿತ್ರಪಕ್ಷಗಳ ಮೂಲಕ ಸ್ಟಾಲಿನ್ ಹಿಡಿತ ಸಾಧಿಸಲು ಯತ್ನಿಸಿದರೆ, ಎಐಎಡಿಎಂಕೆ ಬಣವು ವಿಜಯ್ ಪಾಲಿಗೆ ಪರ್ಯಾಯ ಬೆಂಬಲವಾಗಿ ಕೆಲಸ ಮಾಡಲಿದೆ. ಆದರೆ, ಈ ಇಬ್ಬರು ದ್ರಾವಿಡ ದೈತ್ಯರ ನಡುವೆ ಸಿಲುಕಿ ವಿಜಯ್ ಸರ್ಕಾರ ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸ. ವಿಜಯ್ ಬಳಿ ಸದ್ಯ ಪರ್ಯಾಯ ಆಟಗಾರ ಸಿದ್ಧನಿದ್ದು, ಆದರೆ ಮುಂದಿನ ಹಾದಿ ಇದೇ ರೀತಿ ಇರುತ್ತದೆ ಎಂದು ಈಗಲೇ ಭವಿಷ್ಯ ನುಡಿಯಲು ಸಾಧ್ಯವಾಗದು(ಏಜೆನ್ಸೀಸ್).