SRPF Constable Shoots Himself
- 'ಲೋಕ ಭವನ' ಸಂಕೀರ್ಣದಲ್ಲಿ ಕರ್ತವ್ಯದಲ್ಲಿದ್ದ SRPF ಕಾನ್ಸ್ಟೇಬಲ್ ಸೂಸೈಡ್
- ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ಟೇಬಲ್, ಡೆತ್ನೋಟ್ ಪತ್ತೆ
- ಪ್ರೇಮ ವೈಫಲ್ಯ, ಖಾಸಗಿ ಫೋಟೋ ದುರುಯೋಗವೇ ಇದಕ್ಕೆ ಕಾರಣ ಎಂದು ಶಂಕೆ
ಮುಂಬೈ: ಕಫ್ ಪರೇಡ್ ಪ್ರದೇಶದಲ್ಲಿರುವ ಹೈ-ಪ್ರೊಫೈಲ್ 'ಲೋಕ ಭವನ' ಸಂಕೀರ್ಣದಲ್ಲಿ ಕರ್ತವ್ಯದಲ್ಲಿದ್ದ ಮಹಾರಾಷ್ಟ್ರ ರಾಜ್ಯ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೇಬಲ್(SRPF Constable ) ಒಬ್ಬರು ಮಂಗಳವಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಪುಷ್ಕರ್ ಶಿಂಧೆ (26) ಎಂದು ಗುರುತಿಸಲಾಗಿದೆ. ಅವರ ಈ ನಿರ್ಧಾರಕ್ಕೆ ಪ್ರೇಮ ವೈಫಲ್ಯ ಹಾಗೂ ಖಾಸಗಿ ಫೋಟೋಗಳ ದುರುಪಯೋಗ ಮಾಡಿಕೊಂಡಿರುವುದು ಹಾಗೂ ವೈಯಕ್ತಿಕ ವಿಚಾರ ಇದಕ್ಕೆ ಕಾರಣ ಎನ್ನುವುದು ಪ್ರಾಥಮಿಕ ವರದಿಯಿಂದ ಬೆಳಕಿಗೆ ಬಂದಿದೆ.
ರಾತ್ರಿ ಪಾಳಿ ಕೆಲಸದಲ್ಲಿದ್ದ ಪುಷ್ಕರ್ರಾಜ್ಯ ಮೀಸಲು ಪೊಲೀಸ್ ಪಡೆ (SRPF) ಪುಣೆಗೆ ಸೇರಿದ ಪುಷ್ಕರ್ ಅವರನ್ನು ಮುಂಬೈನ ಲೋಕಭವನ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸೋಮವಾರ ಸಂಜೆ 6 ರಿಂದ ರಾತ್ರಿ 9 ರವರೆಗೆ ಕೆಲಸದಲ್ಲಿದ್ದರು. . ಪ್ರತಿ ಮೂರು ಗಂಟೆಗಳಿಗೊಮ್ಮೆ ಭದ್ರತಾ ಪಾಳಿ ಬದಲಾವಣೆಯಾಗುತ್ತದೆ.
ಎಸ್‌ಎಲ್‌ಆರ್ ಗನ್ನಿಂದ ಶೂಟ್
ತಮ್ಮ ಪೋಸ್ಟ್ ಬಳಿಯ ಕೋಣೆಗೆ ಪ್ರವೇಶಿಸಿ, ತಮ್ಮ ಅಧಿಕೃತ ಎಸ್‌ಎಲ್‌ಆರ್ ರೈಫಲ್ ಬಳಸಿ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ . ಕೂಡಲೇ ಅವರನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರೇಮ ವೈಫಲ್ಯ ಹಾಗೂ ಖಾಸಗಿ ಫೋಟೋಗಳ ಬ್ಲ್ಯಾಕ್‌ಮೇಲ್ ಶಂಕೆ?
ಮುಂಬೈ ಪೊಲೀಸರು ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರ ಒಂದನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೂಲಗಳ ಪ್ರಕಾರ, ಮೃತ ಕಾನ್‌ಸ್ಟೆಬಲ್ ಇತ್ತೀಚೆಗೆ ಗಂಭೀರವಾದ ವೈಯಕ್ತಿಕ ಮತ್ತು ಪ್ರೇಮ ಸಂಬಂಧದ ಸಮಸ್ಯೆಯಿಂದ ಬಳಲುತ್ತಿದ್ದರು.
ವಶಪಡಿಸಿಕೊಳ್ಳಲಾದ ಡೆತ್‌ನೋಟ್‌ನಲ್ಲಿ ಕೆಲವು ಖಾಸಗಿ ಫೋಟೋಗಳು, ಸಂಬಂಧದಲ್ಲಿನ ಬಿರುಕು ಹಾಗೂ ಬ್ಲ್ಯಾಕ್‌ಮೇಲ್‌ನಂತಹ ಗಂಭೀರ ವಿಷಯಗಳ ಬಗ್ಗೆ ಉಲ್ಲೇಖವಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಬ್ಲ್ಯಾಕ್‌ಮೇಲ್ ಅಥವಾ ಪ್ರಚೋದನೆಯ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಶಿಂಧೆ ಅವರ ಮೊಬೈಲ್ ಫೋನ್ ಅನ್ನು ಜಪ್ತಿ ಮಾಡಿದ್ದು, ಇತ್ತೀಚಿನ ಅವರ ಚಾಟ್‌ಗಳು, ಕರೆ ದಾಖಲೆಗಳು ಮತ್ತು ಫೋಟೋಗಳನ್ನು ಪರಿಶೀಲಿಸಲು ಸೈಬರ್ ಸೆಲ್‌ನ ಸಹಾಯವನ್ನು ಪಡೆದಿದ್ದಾರೆ. ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಸದ್ಯಕ್ಕೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ, (ಏಜೆನ್ಸೀಸ್).