ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರಿನಂದಾ (15) ಕೊನೆಗೂ ಶವವಾಗಿ(Srinanda Kerala Girl) ಪತ್ತೆಯಾಗಿದೆ.
ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಾಧಾರ ಜಲಪಾತದ ಬಳಿಯ ಭೀಕರ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಇಡೀ ಜಿಲ್ಲೆಯನ್ನೇ ಈ ಘಟನೆ ನಡುಗಿಸಿದೆ.
3 ದಿನಗಳ ತೀವ್ರ ಶೋಧ
ಕೇರಳದಿಂದ ಕುಟುಂಬದ ಸದಸ್ಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಶ್ರಿನಂದಾ, ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಾಧಾರ ಪ್ರದೇಶದಲ್ಲಿ ಹಠಾತ್ ನಾಪತ್ತೆಯಾಗಿದ್ದಳು. ಬಾಲಕಿ ಕಾಣದಿದ್ದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅಂದಿನಿಂದಲೂ ಜಿಲ್ಲಾ ಪೊಲೀಸ್ ಪಡೆ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ರಕ್ಷಣಾ ತಂಡಗಳು ಕಾಡು-ಮೇಡು ಅಲೆಯುತ್ತಾ ತೀವ್ರ ಶೋಧ ನಡೆಸಿದ್ದವು. ಅಂತಿಮವಾಗಿ ಶುಕ್ರವಾರ ಮಾಣಿಕ್ಯಾಧಾರ ಸಮೀಪದ ಸುಮಾರು 2,000 ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಕುಟುಂಬಸ್ಥರ ಆಕ್ರಂದನ, ಮುಗಿಲು ಮುಟ್ಟಿದ ಶೋಕ
ಬಾಲಕಿಯ ಶವ ಸಿಗುತ್ತಿದ್ದಂತೆಯೇ ಸ್ಥಳದಲ್ಲಿ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳ ಮೇಲೆ ಎಷ್ಟೋ ಕನಸುಗಳನ್ನು ಇಟ್ಟುಕೊಂಡಿದ್ದ ತಂದೆ-ತಾಯಿ, ಮೃತದೇಹವನ್ನು ಕಂಡು ಮೂರ್ಛೆ ಹೋದ ಪ್ರಸಂಗಗಳು ನಡೆದವು. "ನೋಡಲು ಬಂದಿದ್ದ ಮಗಳು ಕಣ್ಣ ಮುಂದೆಯೇ ಕಣ್ಮರೆಯಾಗಿ ಹೀಗೆ ಪ್ರಪಾತದಲ್ಲಿ ಮಲಗಿದ್ದಾಳೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಕುಟುಂಬಸ್ಥರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಅಪಘಾತವೋ ಅಥವಾ ಬೇರೇನಾದರೂ?
ಬಾಲಕಿ ನಾಪತ್ತೆಯಾದ ದಿನದಿಂದಲೂ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಈಗ ಪ್ರಪಾತದಲ್ಲಿ ಶವ ಪತ್ತೆಯಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಾಲು ಜಾರಿ ಬಾಲಕಿ ಪ್ರಪಾತಕ್ಕೆ ಬಿದ್ದಿದ್ದಾಳೆಯೇ? ಪ್ರವಾಸಿಗರ ದಟ್ಟಣೆಯ ನಡುವೆ ಏನಾದರೂ ಅಚಾತುರ್ಯ ನಡೆದಿದೆಯೇ?ಅಥವಾ ಈ ಸಾವಿನ ಹಿಂದೆ ಬೇರೆಯದೇ ಆದ ಕಾರಣಗಳಿವೆಯೇ? ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸುತ್ತಿದ್ದು, ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಪಾತದಿಂದ ಮೃತದೇಹವನ್ನು ಮೇಲಕ್ಕೆತ್ತಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ,(ಏಜೆನ್ಸೀಸ್).