ಚೆನ್ನೈ: ಶ್ರೀಲಂಕಾದ ತಮಿಳರ ಪರವಾಗಿ ಮಾತನಾಡಿರುವ ಮಾಜಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ(K Annamalai), ತಮಿಳು ಸಮುದಾಯದ ಗುರುತು ಧರ್ಮ ಮತ್ತು ಜಾತಿಯನ್ನು ಮೀರಿರಬೇಕು. ತಮಿಳು ಸಮುದಾಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಗುರುತುಗಳಿಗೆ ಸೀಮಿತಗೊಳಿಸಬಾರದು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಉತ್ತರ ಅಮೆರಿಕದ ತಮಿಳು ಸಂಘಗಳ ಒಕ್ಕೂಟ (FeTNA) ಆಯೋಜಿಸಿದ್ದ ತಮಿಳು ವಿಝಾವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಜಾತಿ, ಧರ್ಮಗಳ ಗುರುತುಗಳಿಗಿಂತ ಹೆಚ್ಚಾಗಿ ದೊಡ್ಡ ಮತ್ತು ಪ್ರಮುಖ ಗುರುತು ತಮಿಳು ಆಗಿರಬೇಕು ಎಂದು ಹೇಳಿದ್ದಾರೆ.
ವಿದೇಶದಲ್ಲಿರುವ ತಮಿಳರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಕಳೆದುಕೊಳ್ಳದೆ ಅವರು ವಾಸಿಸುವ ದೇಶಗಳಿಗೆ ಕೊಡುಗೆ ನೀಡುತ್ತಾ ಪ್ರಪಂಚದಾದ್ಯಂತ ತಮ್ಮ ಬೇರುಗಳನ್ನು ಹರಡಿದ್ದಾರೆ. ಉತ್ತರ ಅಮೆರಿಕಾದಲ್ಲಿ ಕೆಲವು ತಮಿಳರು ಜನಗಣತಿ ನಮೂನೆಗಳಲ್ಲಿ ತಮ್ಮನ್ನು 'ಹಿಂದೂ' ಎಂದು ಗುರುತಿಸಿಕೊಳ್ಳುವ ಬದಲು 'ತಮಿಳು' ಎಂದು ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶ್ರೀಲಂಕಾ ತಮಿಳರ ಪರವಾಗಿ ಮಾತನಾಡಿದ ಅವರು, ಅವರನ್ನು ನಿರಾಶ್ರಿತರು ಎಂದು ಕರೆಯುವುದು ತಪ್ಪು. ಸುಮಾರು ನಾಲ್ಕು ಲಕ್ಷ ಶ್ರೀಲಂಕಾದ ತಮಿಳರು ಉತ್ತರ ಅಮೆರಿಕಾದಲ್ಲಿ ಮತ್ತು 90,000 ಜನ ಭಾರತೀಯರಾಗಿ ವಾಸಿಸುತ್ತಿದ್ದಾರೆ. ಭಾರತ ಆ. 15ರಂದು ಮತ್ತು ಶ್ರೀಲಂಕಾ ಫೆ. 4ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದರೂ, ಶ್ರೀಲಂಕಾದ ತಮಿಳರು ಇನ್ನೂ ಸ್ವಾತಂತ್ರ್ಯವಿಲ್ಲದೆ ಇದ್ದಾರೆ. ನಮ್ಮ ಜೀವಿತಾವಧಿಯಲ್ಲಿ ಅವರಿಗೆ ನ್ಯಾಯ ಸಿಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. FeTNA ಅವರ ಪರ ಹೋರಾಟ ಮಾಡಬೇಕು ಎಂದಿದ್ದಾರೆ.
FeTNA ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಅಣ್ಣಾಮಲೈ ಹಿಂದುತ್ವ ಸಿದ್ದಾಂತಕ್ಕೆ ವಿರುದ್ಧವಾಗಿದ್ದಾರೆ ಎಂದು ಟೀಕೆಗೆ ಪ್ರತಿಕ್ರಿಯಿಸಿರುವ ಅವರು, FeTNA ಎಲ್ಲಾ ಗುರುತುಗಳನ್ನು ಮೀರಿ ಪ್ರಪಂಚದಾದ್ಯಂತ ತಮಿಳರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು. FeTNA ರಾಜಕೀಯ ಪಕ್ಷಗಳನ್ನು ಮೀರಿ ತಮಿಳಿಗಾಗಿ ನಿಲ್ಲುವ ಯಾವುದೇ ನಾಯಕನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ (ಏಜೆನ್ಸೀಸ್).