Sreeleela 
ದೇಶ

ನನ್ನ ತಾಯಿ ನನ್ನನ್ನು ಪ್ರೀತಿಸುವಷ್ಟೇ ಇವರನ್ನು ಪ್ರೀತಿಸುತ್ತೇನೆ! ಮಕ್ಕಳನ್ನು ದತ್ತು ಪಡೆಯಲು ನಿಜವಾದ ಕಾರಣ ಬಿಚ್ಚಿಟ್ಟ ಶ್ರೀಲೀಲಾ! Sreeleela

ಪ್ರಮುಖ ಮುಖ್ಯಾಂಶಗಳು

  • 21ನೇ ವಯಸ್ಸಿನಲ್ಲೇ ಇಬ್ಬರು ಮಕ್ಕಳ ದತ್ತು ಪಡೆದ ಹಿಂದಿನ ಕಥೆ ಇಲ್ಲಿದೆ
  • ಮಕ್ಕಳ ಬಗ್ಗೆ ಭಾವುಕರಾದ ಶ್ರೀಲೀಲಾ
ಹೈದರಾಬಾದ್​: ( Sreeleela) ಕನ್ನಡ ಮೂಲದ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ತಾರೆ. ಈ ಸುಂದರ ತಾರೆ ಪ್ರಸ್ತುತ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ನಟನೆಯಿಂದ ಮಾತ್ರವಲ್ಲದೆ, ತಮ್ಮ ಉದಾರಿ ಗುಣದಿಂದಲೂ ಅವರು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 21ರ ಹರೆಯದಲ್ಲೇ ಇಬ್ಬರು ಮಕ್ಕಳನ್ನು ದತ್ತು ಪಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದ ಶ್ರೀಲೀಲಾ, ಈ ನಿರ್ಧಾರದ ಹಿಂದಿನ ಅಸಲಿ ಕಥೆಯನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಮಕ್ಕಳನ್ನು ದತ್ತು ಪಡೆಯುವ ಆಲೋಚನೆ ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಶ್ರೀಲೀಲಾ ಭಾವುಕರಾಗಿ ಉತ್ತರಿಸಿದ್ದಾರೆ. ನಾನು ಮಕ್ಕಳನ್ನು ದತ್ತು ಪಡೆಯಲು ಕಾರಣ ಒಬ್ಬ ಸಿನಿಮಾ ನಿರ್ದೇಶಕರು. ಕನ್ನಡದಲ್ಲಿ ಸಿನಿಮಾ ಮಾಡುವಾಗ ನಿರ್ದೇಶಕರು ನನ್ನನ್ನು ಅನಾಥಾಶ್ರಮಕ್ಕೆ ಕರೆದೊಯ್ದರು. ಅಲ್ಲಿನ ಮಕ್ಕಳು ನನಗೆ ತುಂಬಾ ಹತ್ತಿರವಾದರು. ಅವಕಾಶ ಸಿಕ್ಕಾಗಲೆಲ್ಲಾ ನಾನು ಅಲ್ಲಿಗೆ ಹೋಗಿ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದೇನು. ಅದೇ ಸಮಯದಲ್ಲಿ, ನಾನು ಅಲ್ಲಿ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದೆ ಎಂದಿದ್ದಾರೆ.
ತಾವು ಮಕ್ಕಳನ್ನು ದತ್ತು ಪಡೆದ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ನಾನು ಇದನ್ನು ರಹಸ್ಯವಾಗಿಡಲು ಬಯಸಿದ್ದೆ. ಆದರೆ ಅನಾಥಾಶ್ರಮದ ನಿರ್ವಾಹಕರು ಇದನ್ನು ಬಹಿರಂಗಪಡಿಸಿದರು. ಈ ವಿಷಯ ತಿಳಿದು ಕನಿಷ್ಠ ನಾಲ್ಕು ಮಂದಿ ಸಹಾಯಕ್ಕೆ ಮುಂದೆ ಬಂದರೆ ಅದು ಒಳ್ಳೆಯದಲ್ಲವೇ ಎಂಬುದು ಅವರ ಆಶಯವಾಗಿತ್ತು. ಅವರ ಮಾತು ನಿಜವಾಯಿತು ಎಂದಿದ್ದಾರೆ.
ನನ್ನ ತಾಯಿ ನನ್ನನ್ನು ಎಷ್ಟೊಂದು ಪ್ರೀತಿಯಿಂದ ಸಾಕಿದ್ದಾರೋ, ಅಷ್ಟೇ ಪ್ರೀತಿಯನ್ನು ನಾನು ಆ ಮಕ್ಕಳಿಗೆ ನೀಡಲು ಬಯಸುತ್ತೇನೆ. ಅವರು ಸದಾ ನನ್ನ ಜೊತೆಯಲ್ಲಿಯೇ ಇರಬೇಕು ಎಂದು ಅನ್ನಿಸುತ್ತದೆ. ಅವರು ನನ್ನೊಂದಿಗಿಲ್ಲದಿದ್ದರೂ, ಅವರ ಪ್ರತಿಯೊಂದು ಜವಾಬ್ದಾರಿಯನ್ನು ನಾನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದು ಭಾವುಕರಾಗಿದ್ದಾರೆ.
2022 ರಲ್ಲಿ ಶ್ರೀಲೀಲಾ ಅವರು ಗುರು ಮತ್ತು ಶೋಭಿತಾ ಎಂಬ ಇಬ್ಬರು ವಿಶೇಷ ಚೇತನ (ಅಂಗವಿಕಲ) ಮಕ್ಕಳನ್ನು ದತ್ತು ಪಡೆದಿದ್ದರು. ಇತ್ತೀಚೆಗೆ ಅವರ ಹುಟ್ಟುಹಬ್ಬದ ಸಮಯದಲ್ಲಿ ಮತ್ತೊಂದು ಮಗುವನ್ನು ದತ್ತು ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಮಗು ತಮ್ಮ ಅಣ್ಣನ ಮಗಳು (ಸೊಸೆ) ಎಂದು ನಟಿ ಸ್ಪಷ್ಟಪಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದರು.