ಮೋದಿಯನ್ನು ನಿಂದಿಸೋದು, ಅಪಪ್ರಚಾರ ಮಾಡೋದು ಬಿಟ್ಟು ಕಾಂಗ್ರೆಸ್ಗೆ ಬೇರೆ ಕೆಲಸವಿಲ್ಲ: ಪ್ರಧಾನಿ ಮೋದಿ ಗುಡುಗು...Narendra Modi
- ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವೆ ಸಂಘರ್ಷ, ಭಾರತದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ
- ಕಾಂಗ್ರೆಸ್ ಜವಾಬ್ದಾರಿಯುತವಾದ ಕೆಲಸವನ್ನು ಮಾಡುತ್ತಿಲ್ಲ ಎಂದ ಪ್ರಧಾನಿ ಮೋದಿ
- ಅಸ್ಸಾಂನಿಂದಲೂ ಕಾಂಗ್ರೆಸ್ನನ್ನು ಹೊರಹಾಕಿದ್ದೀರಾ..ಕಾಂಗ್ರೆಸ್ಗೆ ಎಲ್ಲರಿಂದ ಒಳ್ಳೆ ಪಾಠ ಸಿಕ್ಕಿದೆ
ದಿಸ್ಪುರ್: `ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ 15ನೇ ದಿನದ ಸಂಘರ್ಷದಿಂದ ಭಾರತದಲ್ಲಿರುವ ಜನರ ಮೇಲಾಗುವ ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಆದರೆ, ವಿಪಕ್ಷ ನಾಯಕರು ಜನರಲ್ಲಿ ಭೀತಿ ಮೂಡಿಸಿ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ' ಎಂದು ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ( Narendra Modi ) ಯವರು ಕಿಡಿಕಾರಿದರು.
ಅಸ್ಸಾಂನ ಸಿಲ್ಚಾರ್ನಲ್ಲಿ 23,550 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಯನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, `ಕಾಂಗ್ರೆಸ್ ಭಾರತದ ಅಭಿವೃದ್ಧಿಯನ್ನು ಸಹಿಸದ ಶತ್ರುಗಳ ಕೈಗೊಂಬೆಯಾಗಿದೆ. ಅವರ ಆಡಳಿತಾವಧಿಯಲ್ಲಿ ಈಶಾನ್ಯ ಭಾಗದಲ್ಲಿ ಯಾವುದೇ ಸುಧಾರಣೆ ತಂದಿಲ್ಲ' ಎಂದು ಹೇಳಿದರು.
ಏನಿದು ಬರಾಕ್ ಕಣಿವೆ ಗಡಿ?
ಮುಂದುವರೆದು, `ಸ್ವಾತಂತ್ರ್ಯದ ಕಾಲದಲ್ಲಿ ಆಡಳಿತದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರವು ಬರಾಕ್ ಕಣಿವೆಯು ಸಮುದ್ರ ಪ್ರವೇಶಿಸದಂತೆ ತಡೆದು ಗಡಿರೇಖೆಗೆ ಅನುಮತಿ ನೀಡಿತ್ತು. ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದ ಈ ಪ್ರದೇಶ ಆರ್ಥಿಕ ಬಲವನ್ನು ಕಳೆದುಕೊಂಡಿತು. ಅಂದಿನ ಸರ್ಕಾರದ ಈ ನಿರ್ಧಾರದಿಂದ ಆದಾಯದ ಮೇಲೆ ಹೊಡೆತ ಬಿದ್ದಿತ್ತು' ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.
`ಜಗತ್ತು ಸಂಘರ್ಷವನ್ನು ಎದುರಿಸುತ್ತಿದೆ. ದೇಶದ ಜನರ ಮೇಲೆ ಇದರಿಂದಾಗುವ ಆತಂಕವನ್ನು ತಪ್ಪಿಸೋದು ನಮ್ಮ ಆಶಯ ಮತ್ತು ಪ್ರಯತ್ನ. ಆದರೆ, ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿದ್ದು ಬೇಜವಾಬ್ದಾರಿಯುತ ಕೆಲಸ ಮಾಡುತ್ತಿದೆ. ಈಗಾಗಲೇ ಆತಂಕದಲ್ಲಿರುವ ಜನರನ್ನು ಸಂಕಷ್ಟಕ್ಕೆ ದೂಡುವ ಯತ್ನ ಮಾಡುತ್ತಿದೆ' ಎಂದು ಅವರು ಗುಡುಗಿದರು.
ಮೋದಿಯನ್ನು ನಿಂದಿಸೋದೆ ಕೆಲಸ
`ಪ್ರಧಾನಿ ಮೋದಿಯವರನ್ನು ನಿಂದಿಸೋದು ಹೇಗೆ, ಸುಳ್ಳು ಸುದ್ದಿಗಳನ್ನು ಹರಡೋದು ಹೇಗೆ? ಜನರನ್ನು ದಾರಿ ತಪ್ಪಿಸಲು ಇರುವ ತಂತ್ರ ಯಾವುದು ಎಂಬ ಬಗ್ಗೆ ಚಿಂತಿಸುವುದು ಕಾಂಗ್ರೆಸ್ನ ಕೆಲಸ. ಎಐ ಇಂಪ್ಯಾಕ್ಟ್ ಸಭೆಯಲ್ಲಿ ಜಾಗತಿಕ ನಾಯಕರು, ಟೆಕ್ ಕಂಪನಿ ಮುಖ್ಯಸ್ಥರು ಇದ್ದರು. ಅವರ ಮುಂದೆ ಕಾಂಗ್ರೆಸ್ ಬಟ್ಟೆ ಹರಿದು ಹಾಕಿಕೊಳ್ಳುವ ಮೂಲಕ ಜಗತ್ತೇ ಮುಜುಗರಕ್ಕೀಡಾಗುವ ಕೆಲಸವನ್ನು ಮಾಡಿತ್ತು. ದೇಶಕ್ಕೆ ತಾವೇನು ಮಾಡುತ್ತಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟರು' ಎಂದು ಹೇಳಿದರು.
ಶತಮಾನಗಳ ಸೋಲು ಖಚಿತ
ತಮ್ಮ ಬಟ್ಟೆ ತಾವೇ ಹರಿದು ಹಾಕಿಕೊಳ್ಳುವುದನ್ನು ಹೊರತುಪಡಿಸಿ, ಕಾಂಗ್ರೆಸ್ಗೆ ಮಾಡೋಕೆ ಬೇರೆ ಕೆಲಸ ಆದ್ರೂ ಏನಿದೆ? ಒಂದರನಂತರ ಒಂದು ಚುನಾವಣೆಗಳಲ್ಲಿ ಸೋಲು ಕಾಣುತ್ತಾ ಬರುತ್ತಿದೆ. ನೀವು ಸಹ ಅಸ್ಸಾಂನಿಂದ ಕಾಂಗ್ರೆಸ್ನ್ನು ಹೊರ ಹಾಕಿದ್ದೀರಿ. ಎಲ್ಲ ರಾಜ್ಯವೂ ಅವರಿಗೆ ತಕ್ಕುದಾದ ಪಾಠ ಕಲಿಸುತ್ತಿದೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶತಮಾನಗಳ ಸೋಲು ಅನುಭವಿಸೋದು ಗ್ಯಾರಂಟಿ ಎಂದರು, (ಏಜನ್ಸೀಸ್).