AIADMK ಪಕ್ಷದಲ್ಲಿ ವಿಭಜನೆ 
ದೇಶ

AIADMK ಪಕ್ಷದಲ್ಲಿ ಯಾವುದೂ ಸರಿಯಿಲ್ಲ: ಪಳನಿಸ್ವಾಮಿ 'ಮಾಸ್ಟರ್ ಪ್ಲಾನ್' ಬಟಾಬಯಲು ಮಾಡಿದ ಷಣ್ಮುಗಂ! | AIADMK Split

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ರಾಜಕೀಯ ದಿನದಿಂದ ದಿನಕ್ಕೆ ಹಲವು ಶಾಕಿಂಗ್​ ತಿರುವುಗಳನ್ನು ಪಡೆಯುತ್ತಿದೆ
  • ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷ ಎಐಎಡಿಎಂಕೆ ವಿಭಜನೆ
  • ಎಐಎಡಿಎಂಕೆಯಲ್ಲಿನ ವಿಭಜನೆಗೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಎಂದ ಷಣ್ಮುಗಂ
AIADMK Split: ತಮಿಳುನಾಡು ರಾಜಕೀಯ ದಿನದಿಂದ ದಿನಕ್ಕೆ ಹಲವು ಶಾಕಿಂಗ್​ ತಿರುವುಗಳನ್ನು ಪಡೆಯುತ್ತಿದೆ. ಅತ್ತ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ನಾಯಕ ವಿಜಯ್​ ಅಧಿಕಾರದ ಚುಕ್ಕಾಣಿ ಹಿಡಿದರೆ, ಇತ್ತ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ವಿರೋಧ ಪಕ್ಷ ಎಐಎಡಿಎಂಕೆ ವಿಭಜನೆಗೊಂಡಿದೆ.
ಪಕ್ಷದಲ್ಲಿನ ತೀವ್ರ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆ, ಸಿ.ವಿ. ಷಣ್ಮುಗಂ ನೇತೃತ್ವದ ಒಂದು ಬಣ ಮಂಗಳವಾರ (ಮೇ.12) ಒಂದು ಶಾಕಿಂಗ್​ ನಿರ್ಧಾರವನ್ನು ಕೈಗೊಂಡಿದೆ. ನಿರ್ಣಾಯಕ ಬಹುಮತ ಪರೀಕ್ಷೆಗೆ ಮುಂಚಿತವಾಗಿ ವಿಜಯ್ ನೇತೃತ್ವದ ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಬೆಂಬಲಿಸುವುದಾಗಿ ಷಣ್ಮುಗಂ ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಸದ್ಯ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ.
ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಯೊಂದಿಗಿನ ಸಂಬಂಧಗಳು ಕಡಿದುಹೋಗಿವೆ ಮತ್ತು ಪಕ್ಷವು ಪ್ರಸ್ತುತ ಯಾವುದೇ ಮೈತ್ರಿಯಲ್ಲಿಲ್ಲ ಎಂದು ಷಣ್ಮುಗಂ ಸ್ಪಷ್ಟಪಡಿಸಿದರು. ಪಾರ್ಟಿಯ ಪರಿಸ್ಥಿತಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಎಡಿಎಂಕೆಯಲ್ಲಿನ ವಿಭಜನೆಗೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರೇ ಕಾರಣ. ಸರ್ಕಾರ ರಚಿಸಲು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಪಳನಿಸ್ವಾಮಿ ಬಯಸಿದ್ದರು ಎಂದು ಆರೋಪಿಸಿದ್ದಾರೆ.
"ನಾವು ಈ ಪಕ್ಷವನ್ನು ಡಿಎಂಕೆ ವಿರುದ್ಧ ಸ್ಥಾಪಿಸಿರುವುದು. 53 ವರ್ಷಗಳಿಂದ ನಮ್ಮ ರಾಜಕೀಯ ಡಿಎಂಕೆ ವಿರುದ್ಧವೇ ಆಗಿದೆ. ಪಕ್ಷದ ಬಹುಪಾಲು ಸದಸ್ಯರು ತಮ್ಮ ಬೆಂಬಲದೊಂದಿಗೆ ಸರ್ಕಾರ ರಚಿಸುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದರು. ನಾವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೆ, ಎಐಎಡಿಎಂಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿಯೇ, ಚುನಾವಣೆಯಲ್ಲಿ ಗೆದ್ದ ಟಿವಿಕೆಯನ್ನು ಬೆಂಬಲಿಸಲು ನಾವು ನಿರ್ಧರಿಸಿದ್ದೇವೆ" ಎಂದು ಸ್ಪಷ್ಟಪಡಿಸಿದರು.
ಸದ್ಯ ಪಕ್ಷದಲ್ಲಿ ಬಂಡಾಯದ ಮಟ್ಟ ಎಷ್ಟಿದೆಯೆಂದರೆ, ಪಳನಿಸ್ವಾಮಿ ನಾಯಕತ್ವದ ಬಗ್ಗೆ ಅತೃಪ್ತರಾಗಿರುವ ಶಾಸಕರು, ಮಾಜಿ ಸಚಿವ ಎಸ್.ಪಿ. ವೇಲುಮಣಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿ ಹಂಗಾಮಿ ಸ್ಪೀಕರ್ ಎಂ.ವಿ. ಕರುಪ್ಪಯ್ಯ ಅವರಿಗೆ ಪತ್ರವನ್ನೂ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷದ ತಳಮಟ್ಟದ ಪ್ರದರ್ಶನದ ಜವಾಬ್ದಾರಿಯನ್ನು ಹೊತ್ತುಕೊಂಡು ಪಳನಿಸ್ವಾಮಿ ರಾಜೀನಾಮೆ ನೀಡಬೇಕೆಂದು ಬಹುತೇಕ ಶಾಸಕರು ಒತ್ತಾಯಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಸಭೆಗಳಿಗೆ ಷಣ್ಮುಗಂ ಮತ್ತು ವೇಲುಮಣಿ ಸೇರಿದಂತೆ ಹಲವಾರು ಹಿರಿಯ ನಾಯಕರು ಮತ್ತು ಶಾಸಕರು ಗೈರುಹಾಜರಾಗಿರುವುದು ಪಕ್ಷದಲ್ಲಿನ ವಿಭಜನೆಯ ಸ್ಪಷ್ಟ ಸೂಚನೆ ಎನ್ನಲಾಗಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ಶಾಸಕರ ಪ್ರಮಾಣವಚನ ಸಮಾರಂಭದಲ್ಲೂ ಎಐಎಡಿಎಂಕೆ ಶಾಸಕರು ಪ್ರತ್ಯೇಕ ಗುಂಪುಗಳಲ್ಲಿ ಕುಳಿತಿದ್ದು ಚರ್ಚೆಯ ಕೇಂದ್ರಬಿಂದುವಾಗಿದೆ,(ಏಜೆನ್ಸೀಸ್).