SpiceJet (ಚಿತ್ರ X) 
ದೇಶ

ಬಾಗ್ಡೋಗ್ರಾ ಟು ದೆಹಲಿ ಫ್ಲೈಟ್ ಕ್ಯಾನ್ಸಲ್ ಬೆನ್ನಲ್ಲೇ ರಣರಂಗವಾದ ಏರ್‌ಪೋರ್ಟ್ ಕೌಂಟರ್! ವಿಡಿಯೋ ಸಾಕ್ಷಿ ಆಧರಿಸಿ ಮಹಿಳಾ ಉದ್ಯೋಗಿ ಸಸ್ಪೆಂಡ್... SpiceJet

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ (SpiceJet) ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ಮಹಿಳಾ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಂಸ್ಥೆಯು ತನ್ನ ಆ ಉದ್ಯೋಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲು ಆದೇಶ ನೀಡಿದೆ.

ಅಸಲಿಗೆ ಗಲಾಟೆ ಶುರುವಾಗಿದ್ದು ಯಾಕೆ?

ಬಾಗ್ಡೋಗ್ರಾದಿಂದ ದೆಹಲಿಗೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನ SG 151 ಕ್ಕೆ ಸಂಬಂಧಿಸಿದಂತೆ ಈ ಇಡೀ ವಿವಾದ ಸೃಷ್ಟಿಯಾಗಿದೆ. ಜೂನ್ 13 ರಂದು ನಿಗದಿತ ಸಮಯಕ್ಕೆ ಹೊರಡಬೇಕಿದ್ದ ಈ ವಿಮಾನವು ಮೊದಲು ಗಂಟೆಗಟ್ಟಲೆ ವಿಳಂಬವಾಗಿ, ನಂತರ ರದ್ದಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಆಕ್ರೋಶಗೊಂಡು ಸ್ಪೈಸ್‌ಜೆಟ್ ಕೌಂಟರ್ ಬಳಿ ಜಮಾಯಿಸಿದರು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಏರ್‌ಲೈನ್ಸ್ ಮಹಿಳಾ ಉದ್ಯೋಗಿ ಮತ್ತು ಪ್ರಯಾಣಿಕರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಕಾರ್ಯಾಚರಣೆಯ ನಿರ್ಬಂಧಗಳ ಸಂಯೋಜನೆಯಿಂದಾಗಿ ಈ ವಿಮಾನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ ಎಂದು ಸ್ಪೈಸ್‌ಜೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಬಾಗ್ಡೋಗ್ರಾದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಾರಾಟ ನಡೆಸಲು ನಿಯೋಜಿಸಲಾದ ವಿಮಾನವನ್ನು ಕೋಲ್ಕತ್ತಾಗೆ ತಿರುಗಿಸಲಾಗಿದ್ದರಿಂದ ವಿಳಂಬ ಉಂಟಾಯಿತು. ಅಂತಿಮವಾಗಿ ವಿಮಾನವನ್ನು ರದ್ದುಗೊಳಿಸಲಾಯಿತು ಎಂದು ವಿಮಾನ ಸಂಸ್ಥೆ ತಿಳಿಸಿದೆ.
ಹವಾಮಾನ ಪರಿಸ್ಥಿತಿಗಳು ಯಾವುದೇ ವಿಮಾನಯಾನ ಸಂಸ್ಥೆಯ ನಿಯಂತ್ರಣಕ್ಕೆ ಮೀರಿದ್ದರೂ, ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ಪ್ರಮಾಣಿಕವಾಗಿ ವಿಷಾದಿಸುತ್ತೇವೆ. ನಮ್ಮ ಪ್ರಯಾಣಿಕರು, ಸಿಬ್ಬಂದಿ ಮತ್ತು ಕಾರ್ಯಾಚರಣೆಗಳ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸ್ಪೈಸ್​ಜೆಟ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ಸ್ಪೈಸ್‌ಜೆಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ವೀಡಿಯೊದಲ್ಲಿ ಕಂಡುಬರುವ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ.
ಈ ವೈರಲ್ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಅನೇಕ ಬಳಕೆದಾರರು ಪ್ರಯಾಣಿಕರ ಬಗ್ಗೆ ಉದ್ಯೋಗಿಯ ವರ್ತನೆಯನ್ನು ಟೀಕಿಸಿದರೆ, ಇನ್ನೂ ಕೆಲವರು ಘರ್ಷಣೆಗ ಕಾರಣವಾದ ಸಂದರ್ಭಗಳ ಬಗ್ಗೆ ಸಂಪೂರ್ಣ ತನಿಖೆಗೆ ಕರೆ ನೀಡಿದ್ದಾರೆ (ಏಜೆನ್ಸೀಸ್​).