ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ (
(SG 105) ವಿಮಾನದಲ್ಲಿ ಎಸಿ ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ತೀವ್ರ ಕಂಗಾಲಾಗಿ ರನ್ವೇನಲ್ಲೇ ಪ್ರತಿಭಟನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ಈ ವಿಮಾನದಲ್ಲಿ ತಾಪಮಾನ ವಿಪರೀತವಾಗಿ ಹೆಚ್ಚಿದ್ದರಿಂದ ಉಸಿರಾಟದ ಮೇಲೆ ತೊಂದರೆ ಉಂಟಾಗಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದು ಧರಣಿ ನಡೆಸಿದ್ದಾರೆ.
ವಿಮಾನದೊಳಗೆ ಉಸಿರುಗಟ್ಟಿಸುವ ವಾತಾವರಣ
ಪ್ರಯಾಣಿಕರು ವಿಮಾನವೇರಿದ ಕೆಲವೇ ನಿಮಿಷಗಳಲ್ಲಿ ಒಳಗಿನ ತಾಪಮಾನ ಹೆಚ್ಚಾಗತೊಡಗಿತು. ಇದರಿಂದ ಜನರು ದಿನ ಪತ್ರಿಕೆ, ನಿಯತಕಾಲಿಕೆಗಳಿಂದ ಗಾಳಿ ಬೀಸಿಕೊಳ್ಳುತ್ತಿದ್ದರು. ಈ ವೇಳೆ ಮಕ್ಕಳು ಮತ್ತು ಹಿರಿಯ ನಾಗರಿಕರು ತೀವ್ರ ಬೆವರಿನಿಂದ ತತ್ತರಿಸಿದ್ದು, ಕೆಲವರಿಗೆ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತು.
ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಮಾತಿನ ಚಕಮಕಿ
ತಮ್ಮ ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿ ಪ್ರಯಾಣಿಸಲು ನಿರಾಕರಿಸಿದ ಪ್ರಯಾಣಿಕರು ವಿಮಾನ ಟೇಕ್ಆಫ್ ಆಗುವುದನ್ನು ತಡೆದರು. ಈ ವೇಳೆ ವಿಮಾನದ ಕ್ಯಾಪ್ಟನ್ ಹಾಗೂ ವಿಮಾನ ಸಿಬ್ಬಂದಿ (Cabin Crew) ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿ, ಪೋಲಿಸರನ್ನು ಕರೆಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಕೋಪಗೊಂಡ ಪ್ರಯಾಣಿಕರು ವಿಮಾನದಿಂದ ತಕ್ಷಣವೇ ಕೆಳಗಿಳಿದು ಟಾರ್ಮ್ಯಾಕ್ ಮೇಲೆಯೇ ಕುಳಿತು, ಸ್ಪೈಸ್‌ಜೆಟ್ ಸೇವೆ ಬಂದ್ ಮಾಡಿ, ಜನರ ಜೀವನದ ಜೊತೆ ಆಟವಾಡುವುದನ್ನು ನಿಲ್ಲಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.
ತಾಂತ್ರಿಕ ದೋಷ ದೃಢ, ಪರ್ಯಾಯ ವಿಮಾನದ ವ್ಯವಸ್ಥೆ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಪ್ರಯಾಣಿಕರ ಕಷ್ಟಪಡುತ್ತಿರುವುದನ್ನು ಕಾಣಬಹುದಾಗಿದೆ. ಆದಾಗ್ಯೂ, ಮಹಿಳೆಯೊಬ್ಬರು ಉಸಿರಾಡಲು ಕಷ್ಟಪಡುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ತದನಂತರ ಬಂದ ತಾಂತ್ರಿಕ ತಂಡವು ವಿಮಾನವನ್ನು ಪರಿಶೀಲಿಸಿ, ತಾಂತ್ರಿಕ ದೋಷವಿರುವುದನ್ನು ಹಾಗೂ ಈ ವಿಮಾನ ಹಾರಾಟ ನಡೆಸಲು ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿತು.
ಬೆಳಗಿನ ಜಾವ 5 ಗಂಟೆಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದ ನಂತರ ಪ್ರಯಾಣಿಕರು ಪುಣೆಗೆ ಪ್ರಯಾಣ ಬೆಳೆಸಿದರು. ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ ವಿಮಾನಯಾನ ಸಂಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿಮಾನಯಾನ ಸಚಿವಾಲಯವನ್ನು ಜಾಲತಾಣಗಳಲ್ಲಿ ಆಗ್ರಹಿಸಲಾಗಿದೆ.
ಸ್ಪೈಸ್‌ಜೆಟ್ ನೀಡಿದ ಸ್ಪಷ್ಟನೆ
ಈ ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಸ್ಪೈಸ್‌ಜೆಟ್ ವಕ್ತಾರರು, "ಆಗಸ್ಟ್ 11 ರಂದು ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ SG 105 ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣವೇ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ತಲುಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂಲ ವಿಮಾನದ ಎಸಿ ಸತತವಾಗಿ ಚಾಲನೆಯಲ್ಲಿತ್ತು ಎಂದಿರುವ ಸಂಸ್ಥೆಯು, ದೆಹಲಿಯ ತೀವ್ರ ಹವಾಮಾನ ವೈಪರೀತ್ಯದ ಕಾರಣ ಪ್ರಯಾಣಿಕರಿಗೆ ಸ್ವಲ್ಪ ಅಸೌಕರ್ಯವಾಗಿರಬಹುದು. ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ (ಏಜೆನ್ಸೀಸ್).